ADVERTISEMENT

ಆರು ತಿಂಗಳಲ್ಲಿ ತಾಂಡಾಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 11:01 IST
Last Updated 14 ನವೆಂಬರ್ 2019, 11:01 IST
ಪಿ.ರಾಜೀವ್
ಪಿ.ರಾಜೀವ್   

ಕಲಬುರ್ಗಿ: ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿರುವ ಎಲ್ಲ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್‌ ಘೋಷಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ 3300 ತಾಂಡಾಗಳಿದ್ದು, ಅವುಗಳ ಪೈಕಿ 476 ತಾಂಡಾಗಳಲ್ಲಿ ವಾಸಿಸುವವರಿಗೆ ಸೂಕ್ತ ದಾಖಲೆಗಳಿಲ್ಲ. ಕಂದಾಯ, ಖಾಸಗಿ ಹಾಗೂ ಅರಣ್ಯ ಇಲಾಖೆಯ ಒಡೆತನದಲ್ಲಿ ಬಹುತೇಕ ತಾಂಡಾಗಳಿವೆ. ಇಲ್ಲಿ ವಾಸಿಸುವವರಿಗೆ ಸೂಕ್ತ ಹಕ್ಕುಪತ್ರಗಳನ್ನು ವಿತರಿಸಲು ನೆರವಾಗುವಂತೆ ನಿಗಮದ ವಿಶೇಷ ಅಧಿಕಾರಿಯು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ತಹಶೀಲ್ದಾರ್‌ಗಳು ಹಾಗೂ ಭೂದಾಖಲೆಗಳ ಅಧಿಕಾರಿಗಳಿಗೆ ಕಂದಾಯ ದಾಖಲೆಗಳನ್ನು ತಯಾರಿಸಲು ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದರು.

ಹಲವು ವರ್ಷಗಳ ಹಿಂದೆಯೇ ಕಂದಾಯ ಗ್ರಾಮಗಳನ್ನಾಗಿ ತಾಂಡಾಗಳನ್ನು ಅಭಿವೃದ್ಧಿಪಡಿಸುವುದಕ್ಕೆ ನಿಯಮಗಳನ್ನು ರೂಪಿಸಿ ರಾಷ್ಟ್ರಪತಿ ಅವರ ಅಂಕಿತವನ್ನೂ ಪಡೆಯಲಾಗಿದೆ. ಆದರೆ, ಅದರಲ್ಲಿನ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅಧಿಕಾರಿಗಳು ವಿಫಲರಾಗಿದ್ದರು. ಆ ಅಂಶಗಳನ್ನು ಈಗ ಸರಳಗೊಳಿಸಲಾಗಿದೆ. ಹೀಗಾಗಿ ತಾಂಡಾಗಳನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ತರುವ ಕೆಲಸ ವೇಗ ಪಡೆಯಲಿದೆ ಎಂದು ಹೇಳಿದರು.

ADVERTISEMENT

‘ಕಲಬುರ್ಗಿ ಜಿಲ್ಲೆಯಲ್ಲಿ 90 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆ ಪೈಕಿ 20 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5200 ತಾಂಡಾಗಳಿವೆ. ಆದರೆ,ಕಂದಾಯ ಇಲಾಖೆ ಅಧಿಕಾರಿಗಳು 2300 ಎಂದು ಗುರುತಿಸಿದ್ದಾರೆ. ಆ ಪೈಕಿ 1400 ತಾಂಡಾಗಳ ಪರಿವರ್ತನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 864 ತಾಂಡಾಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ’ ಎಂದರು.

ಕಂದಾಯ ಗ್ರಾಮಗಳು ಹಾಗೂ ಉಪಗ್ರಾಮಗಳನ್ನಾಗಿ ರಚಿಸುವ ಪ್ರಸ್ತಾವವನ್ನು ಪ್ರತಿ ಬಾರಿ ಜಿಲ್ಲಾಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಇಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೆ. ಈ ಬೇಡಿಕೆಗೆ ಅವರು ಸ್ಪಂದಿಸಿದ್ದಾರೆ. 6 ತಿಂಗಳಲ್ಲಿ ತಾಂಡಾಗಳಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಸಜ್ಜಿತ ಬಂಜಾರ ಭವನವನ್ನು ನಿರ್ಮಿಸಲು ನಿಗಮದಿಂದ ₹ 2 ಕೋಟಿ ಅನುದಾನ ನೀಡಲಾಗಿದೆ. ಸಂಸದ ಡಾ.ಉಮೇಶ ಜಾಧವ ಅವರ ಮನವಿ ಮೇರೆಗೆ ಹೆಚ್ಚುವರಿಯಾಗಿ ₹ 1.5 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.