ADVERTISEMENT

ನಿವಾಸಿಗಳ ನೆಮ್ಮದಿ ಕೆಡಿಸಿದ ‘ಮಳೆ ದಿಗಿಲು’

ಬಸಂತನಗರ: ಮನೆಗಳನ್ನು ತೊರೆಯುವ ನಿವಾಸಿಗಳು, ಶಾಶ್ವತ ಪರಿಹಾರಕ್ಕೆ ಒತ್ತಾಯ

ಭೀಮಣ್ಣ ಬಾಲಯ್ಯ
Published 18 ಜೂನ್ 2021, 16:37 IST
Last Updated 18 ಜೂನ್ 2021, 16:37 IST
ಕಲಬುರ್ಗಿ ನಗರದ ಬಸಂತನಗರ ಬಡಾವಣೆಯ ಚರಂಡಿಯಲ್ಲಿ ಹೂಳು ತುಂಬಿದೆ
ಕಲಬುರ್ಗಿ ನಗರದ ಬಸಂತನಗರ ಬಡಾವಣೆಯ ಚರಂಡಿಯಲ್ಲಿ ಹೂಳು ತುಂಬಿದೆ   

ಕಲಬುರ್ಗಿ: ಇಲ್ಲಿನ ಬಿದ್ದಾಪುರಕ್ಕೆ ಹೊಂದಿಕೊಂಡಂತಿರುವ ಬಸಂತನಗರದ ನಿವಾಸಿಗಳಿಗೆ ಪ್ರತಿ ಮಳೆಗಾಲ ದಿಗಿಲಿನ ರಾತ್ರಿಗಳನ್ನು ಹೊತ್ತು ತರುತ್ತದೆ. ಚರಂಡಿ ಕೃತಕ ಕೆರೆ ಸೃಷ್ಟಿಸುತ್ತದೆ.

ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳುಹೇಳುತ್ತಾರೆ.

ವಾರ್ಡ್‌ ಸಂಖ್ಯೆ 54ಕ್ಕೆ ಒಳಪಡುವ ಈ ಪ್ರದೇಶದಲ್ಲಿಅಂದಾಜು400 ಕುಟುಂಬಗಳು ವಾಸವಾಗಿವೆ. ದೂರದ ಭೋಸಗಾದಿಂದ ಇಲ್ಲಿನ ಹೀರಾಪುರದ ಮಸೀದಿ ಬಳಿ ಹರಿದು ಬರುವ ಚರಂಡಿ ನೀರು ಇವರ ನೆಮ್ಮದಿಯನ್ನೇ ಕಿತ್ತುಕೊಂಡಿದೆ.

ADVERTISEMENT

ರಾಜಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಈ ನೀರು ಮನೆಗಳಿಗೆ ನುಗ್ಗುತ್ತದೆ. ಸೂಚನೆ ಅರಿತ ಕೆಲವರು ಮನೆ ತೊರೆದು ಹಳ್ಳಿಗಳಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳುತ್ತಾರೆ.

ಇನ್ನೂ ಕೆಲವರು ಮನೆ ಮುಂದೆ ಸಾಕಷ್ಟು ಮಣ್ಣು ಹಾಕಿಸಿಕೊಂಡು ನೀರು ನುಗ್ಗದಂತೆ ನೋಡಿಕೊಳ್ಳುತ್ತಾರೆ. ಈ ಎರಡೂ ಸಾಧ್ಯವಾಗದವರಿಗೆ ಜಾಗರಣೆ ಅನಿವಾರ್ಯ. ಇಲ್ಲಿ ದುಡಿಯುವ ವರ್ಗದವರೇ ಹೆಚ್ಚಾಗಿರುವುದರಿಂದ ಎರಡು ದಿನ ಕೆಲಸ ಬಿಟ್ಟು ಮನೆಗೆ ನುಗ್ಗಿದ ನೀರು ಹೊರ ಹಾಕುತ್ತಾರೆ.

ಶತ್ರುವಿನಂತೆ ಕಾಡುವ ತಗ್ಗು ಪ್ರದೇಶ: ಈ ಬಡಾವಣೆಯಲ್ಲಿ ನೆಲ ಸಮತಟ್ಟಾಗಿಲ್ಲ. ತಗ್ಗು ಪ್ರದೇಶ ಹೆಚ್ಚಾಗಿದೆ. ಆದ್ದರಿಂದ ಚರಂಡಿ ನೀರು ಹೊತ್ತು ನಿಲ್ಲುತ್ತದೆ. ಎಲ್ಲೆಂದರಲ್ಲಿ ಬೆಳೆದ ಮುಳ್ಳು–ಕಂಟಿ ವಿಷಜಂತುಗಳನ್ನು ಪೋಷಿಸುತ್ತಿದೆ. ಮಳೆಗಾಲದಲ್ಲಿ ನೀರಿನೊಂದಿಗೆ ಚೇಳು, ಹಾವು ಹಾಗೂ ತ್ಯಾಜ್ಯ ಮನೆ ಸೇರಿ ಜನರ ನೆಮ್ಮದಿ ಹಾಳು ಮಾಡುತ್ತವೆ.

ಸರ್ಕಸ್‌ ಮಾಡಿಸುವ ರಸ್ತೆ: ಈ ಬಡಾವಣೆಯಲ್ಲಿ ಕೆಲ ಕಡೆ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆ ರಸ್ತೆ ನೋಡಲೂ ಸಿಗುವುದಿಲ್ಲ. ವಾಹನ ಸವಾರರು ನೀರು ನಿಂತ ಮಣ್ಣಿನ ರಸ್ತೆಗಳ ಗುಂಡಿಗಳಲ್ಲಿ ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ಇದೆ.

ಪಾಲಿಕೆಯವರು ನಿಯಮಿತವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ. ಆದ್ದರಿಂದ ಎಲ್ಲ ಕಡೆ ತ್ಯಾಜ್ಯ ಸಾಮಾನ್ಯವಾಗಿದೆ ಎನ್ನುತ್ತಾರೆ ನಿವಾಸಿಗಳು.

‘ಪ್ರತಿ ವರ್ಷವೂ ಈ ಸಮಸ್ಯೆ ಎದುರಾಗುತ್ತದೆ. ಚರಂಡಿ ಹೂಳು ತೆಗೆಯಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳೂ ಇತ್ತ ಸುಳಿದಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು.

ಈ ಸಮಸ್ಯೆಗೆ ಮಹಾನಗರ ಪಾಲಿಕೆಯವರು ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಮೂಲಕ ನೆಮ್ಮದಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ನಿವಾಸಿಗಳು.

* ಮಳೆಗಾಲದಲ್ಲಿ ಕೊಳಚೆ ಮಿಶ್ರಿತ ನೀರನ್ನು ದಾಟಿಕೊಂಡೇ ಮನೆ ಸೇರಬೇಕು. ರಾತ್ರಿ ವೇಳೆ ಹಾವು, ಚೇಳಿನ ಭಯ ಶುರುವಾಗುತ್ತದೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.

-ವಿಠ್ಠಲ ಆರ್‌.ಅಳಗಿ, ನಿವಾಸಿ

* ಬಸಂತನಗರ ಬಡಾವಣೆಯಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುತ್ತೇವೆ. ಸಮಸ್ಯೆ ಪರಿಹರಿಸುತ್ತೇವೆ.

-ಆರ್‌.ಪಿ. ಜಾಧವ, ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.