
ಪುರಸಭೆಯಿಂದ ಜಾಣ ಕುರುಡುತನ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ ಬೀದಿದೀಪ ಇಲ್ಲದೇ ಕತ್ತಲೇ ಗತಿ | ಅಗತ್ಯ ಕ್ರಮಕ್ಕೆ ಪುರಸಭೆ ಅಧ್ಯಕ್ಷರ ಸೂಚನೆ
ಚಿಂಚೋಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಚಂದಾಪುರದ ಬಸವ ನಗರದಲ್ಲಿರುವ ವಿಶಾಲವಾದ ಅಂದವಾದ ರಸ್ತೆಯಲ್ಲಿ ಮುಳ್ಳುಕಂಟಿಗಳು ಬೆಳೆದು ರಸ್ತೆಯ ಅಂದಗೆಡಿಸಿದೆ.
ಬಸವ ನಗರ, ಹೌಸಿಂಗ್ ಬೋರ್ಡ ಮಹಿಳೆಯರು, ಮಕ್ಕಳು ಇದೇ ರಸ್ತೆಯಲ್ಲಿ ಬೆಳಿಗ್ಗೆ, ಸಂಜೆಗೆ ವಾಯುವಿಹಾರ ಮಾಡುತ್ತಾರೆ. ಆದರೆ ರಸ್ತೆಯ ವಿಭಜಕದಲ್ಲಿ ಮುಳ್ಳುಕಂಟಿ, ಹುಲ್ಲು ಬೆಳೆದು ವಿಷ ಜಂತುಗಳು ಆಶ್ರಯ ಪಡೆಯುವಂತಾಗಿದೆ. ಹೀಗಾಗಿ ಜನರ ಓಡಾಡಕ್ಕೆ ಸಂಚಕಾರ ತರುತ್ತಿವೆ. ಇದರಿಂದ ಮಹಿಳೆಯರು ಇಲ್ಲಿ ವಾಯುವಿಹಾರ ಮಾಡುವುದೇ ಬಿಡುವ ಪರಿಸ್ಥಿತಿ ಎದುರಾಗಿದೆ.
ದ್ವಿಪಥದ ಈ ರಸ್ತೆಯಲ್ಲಿನ ಮಧ್ಯ ಭಾಗದ ವಿಭಜಕದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನೆಟ್ಟಿರುವ ಬೇವಿನ ಸಸಿಗಳು ಚೆನ್ನಾಗಿ ಬೆಳೆದು ನಿಂತಿವೆ. ಅಲ್ಲದೇ ವಿದ್ಯುತ್ ಕಂಬದಲ್ಲಿನ ಬೀದಿದೀಪಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ವಿಭಜಕದ ತುಂಬಾ ಹುಲ್ಲು, ಗಿಡಗಂಟೆ ಮತ್ತು ಮುಳ್ಳಿನ ಗಿಡಗಳು ಬೆಳೆದಿದ್ದು ಬಡಾವಣೆಯ ರಸ್ತೆ ಕಳಾಹೀನಗೊಂಡಿದೆ.
‘ಪಟ್ಟಣದಲ್ಲಿ ಗಿಡಗಂಟೆ ಇಲ್ಲದ ಕಡೆ ಜಂಗಲ್ ಕಟಿಂಗ್ ಹೆಸರಲ್ಲಿ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಇಲ್ಲಿ ಮುಳ್ಳಿನ ಗಿಡಗಳು ಬೆಳೆದರೂ ಕೇಳುವವರೇ ಇಲ್ಲದಂತಾಗಿದೆ’ ಎಂದು ನಾಗರಿಕರು ಅಲವತ್ತುಕೊಂಡಿದ್ದಾರೆ.
ಇಲ್ಲಿನ ಚಂದಾಪುರದ ವೀರೇಂದ್ರ ಪಾಟೀಲ ಉದ್ಯಾನವನಕ್ಕೆ ಹೊಂದಿಕೊಂಡ ಸರ್ಕಾರಿ ವಸತಿ ಗೃಹ ಹಾಗೂ ಗ್ರಂಥಾಲಯ ಕಟ್ಟಡದ ಮಧ್ಯೆ ಸುಮಾರು 60 ಅಡಿ ಅಗಲದಲ್ಲಿ ಪೊದೆ ಬೆಳೆದು ಮುಖ್ಯರಸ್ತೆಗೆ ಚಾಚಿದರೂ ಕೂಡ ಪುರಸಭೆಯವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
‘ತಿಂಗಳ ಹಿಂದೆಯೇ ಪುರಸಭೆ ಸದಸ್ಯ ನಾಗೇಂದ್ರ ಗುರಂಪಳ್ಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬಡಾವಣೆಯ ನಾಗರಿಕರು ದೂರಿದ್ದಾರೆ. ಪ್ರಜಾವಾಣಿ ಪುರಸಭೆ ಮುಖ್ಯಾಧಿಕಾರಿ ನಿಂಗಮ್ಮ ಬಿರಾದಾರ ಅವರ ಗಮನ ಸೆಳೆದರೂ ಗಿಡಿಗಂಟೆ ತೆರವುಗೊಳಿಸಲು ಮನಸ್ಸು ಮಾಡಿಲ್ಲ. ಕೇವಲ ಹಾರಿಕೆಯ ಉತ್ತರಗಳಿಂದ ನಾಗರಿಕರು ಬಸವಳಿಯುವಂತಾಗಿದೆ.
ಇದರ ಜತೆಗೆ ಬಸವ ನಗರ ಪಕ್ಕದಲ್ಲಿಯೇ ಇರುವ ಹೌಸಿಂಗ್ ಬೋರ್ಡ ಬಡಾವಣೆಯಲ್ಲಿ ಕೆಲವು ವಿದ್ಯುತ್ ಕಂಬಗಳಿಗೆ ದಶಕದಿಂದ ಬೀದಿದೀಪಗಳೇ ಅಳವಡಿಸಿಲ್ಲ. ಇದರಿಂದ ಬಡಾವಣೆಯಲ್ಲಿರುವ ಶಿಕ್ಷಕರು, ವರ್ತಕರು, ಅಧಿಕಾರಿಗಳು ಕತ್ತಲಿನಲ್ಲಿಯೇ ಓಡಾಡುವಂತಾಗಿದೆ. ಬಡಾವಣೆಯಲ್ಲಿ ಚರಂಡಿಗಳು ಸ್ವಚ್ಛ ಮಾಡಿದರೆ ಅದು ಪವಾಡ ಎನ್ನುವ ಸ್ಥಿತಿಯಿದೆ. ರಸ್ತೆಗಳು ಕುರುಚಲು ಗಿಡಗಂಟೆ ಹುಲ್ಲು ಆವರಿಸಿವೆ. ಇದೇ ಬಡಾವಣೆಯಲ್ಲಿ ಶಾಸಕ ಡಾ ಅವಿನಾಶ ಜಾಧವ ಅವರ ಮನೆಯೂ ಇದೇ ಆದರೆ ಇಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ.
ಪುರಸಭೆಯ ವ್ಯಾಪ್ತಿಯ ಚಂದಾಪುರದ ಬಸವ ನಗರದಲ್ಲಿ ಬೆಳೆದ ಮುಳ್ಳುಕಂಟಿ ಮತ್ತು ಹೌಸಿಂಗ್ ಬೋರ್ಡ ಬಡಾವಣೆಯಲ್ಲಿ ವಿದ್ಯುತ್ ದೀಪಗಳು ಅಳವಡಿಸಲು ಕ್ರಮ ಕೈಗೊಳ್ಳಲು ನೈರ್ಮಲ್ಯ ನಿರೀಕ್ಷಕರಿಗೆ ಸೂಚಿಸಿದ್ದೇನೆಆನಂದಕುಮಾರ ಟೈಗರ್ ಚಿಂಚೋಳಿ ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.