ADVERTISEMENT

ಕಲಬುರಗಿ| ಬಸವಣ್ಣ ಜಗತ್ತು ವ್ಯಾಪಿಸುವ ಕಾಲ ಸನ್ನಿಹಿತ: ಅರವಿಂದ ಜತ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 8:21 IST
Last Updated 19 ಜನವರಿ 2026, 8:21 IST
ಕಲಬುರಗಿಯ ಅನುಭವ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಸಂಗೀತ ಕಲಾವಿದ ಪಂ.ಫಕೀರೇಶ ಕಣವಿ ಅವರಿಗೆ ‘ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.
ಕಲಬುರಗಿಯ ಅನುಭವ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಸಂಗೀತ ಕಲಾವಿದ ಪಂ.ಫಕೀರೇಶ ಕಣವಿ ಅವರಿಗೆ ‘ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.   

ಕಲಬುರಗಿ: ‘850 ವರ್ಷಗಳಾದರೂ ನಾವೆಲ್ಲ ಶರಣರ ವಚನಗಳ ಆನುಭಾವಿಕ ನೆಲೆಯನ್ನು ಅರ್ಥೈಸಿಕೊಳ್ಳಲು ಆಗಿಲ್ಲ. ಆದರೆ, ತಂತ್ರಜ್ಞಾನದ ಫಲವಾಗಿ ಬಸವಣ್ಣ ಜಗತ್ತಿಗೆ ತಲುಪುವ ಕಾಲ ಸನ್ನಿಹಿತವಾಗಿದೆ’ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ಕಲಬುರಗಿ ಬಸವ ಸಮಿತಿ ಹಾಗೂ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೋಮನಾಥಪ್ಪ ಖೂಬಾ ಸ್ಮರಣಾರ್ಥ 884ನೇ ಅರಿವಿನ ಮನೆ, ವಚನ ಸಂಕ್ರಾಂತಿ ಹಾಗೂ ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾವೆಲ್ಲ 2008ರಲ್ಲಿ ಎಂ.ಎಂ.ಕಲಬುರ್ಗಿ ನೇತೃತ್ವದಲ್ಲಿ ಬಹುಭಾಷಾ ವಚನ ಅನುವಾದದ ಯೋಜನೆ ಆರಂಭಿಸಿದ್ದೆವು. ಅಲ್ಲಿಂದ ಈತನಕ 2,500 ವಚನಗಳನ್ನು 40 ಭಾಷೆಗಳಿಗೆ ಅನುವಾದಿಸಲಾಗಿದೆ. ಅದುವೇ ದೊಡ್ಡ ಕೆಲಸ ಎಂದು ಭಾವಿಸಿದ್ದೆ. ಆದರೆ, ರಾಜೇಂದ್ರ ಖೂಬಾ ಹಾಗೂ ಮತ್ತವರ ತಂಡವು ಎಐ ಸೇರಿದಂತೆ ತಂತ್ರಜ್ಞಾನ ಸದ್ಬಳಕೆ ಮಾಡಿ ವಚನಗಳನ್ನು ಅಲೌಕಿಕ ಭಾವನೆಯಲ್ಲಿ ವಿಕಾಸಗೊಳಿಸಿ ಏಕಕಾಲಕ್ಕೆ ಬಹುಭಾಷೆಯಲ್ಲಿ ನೀಡುವ ಕೆಲಸ ಮಾಡಿದೆ. ಪ್ರತಿ ಸಾಲಿನ ವಿಶ್ಲೇಷಣೆಯಷ್ಟೇ ಅಲ್ಲದೇ ವಚನಗಳ ಕಾವ್ಯಮಯ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದಾರೆ. ಇದು ಅನುಭಾವಿಕ ಲೋಕ ತಲುಪಿದರೆ, ಜಗತ್ತಿನೆಲ್ಲೆಡೆ ಬಸವಣ್ಣ ವ್ಯಾಪಿಸುತ್ತಾರೆ’ ಎಂದರು.

ADVERTISEMENT

‘ಸೌಂಡ್ಸ್ ಆಫ್ ಬಸವ ಡಾಟ್‌ ಇನ್’ ವೆಬ್‌ಸೈಟ್‌ ರೂಪಿಸಿದ ರಾಜೇಂದ್ರ ಖೂಬಾ ಮಾತನಾಡಿ, ‘ಬಸವಣ್ಣ ಹೇಳಿದ್ದ ವಚನಗಳು ಪುಸ್ತಕದಲ್ಲಿ ಅಲಂಕರಿಸಲು ಅಲ್ಲ. ಬಸವಾದಿ ಶರಣರ ವಚನಗಳು ಶಾಯಿ ಹಾಗೂ ಕಾಗದದಿಂದ ಹುಟ್ಟಿದ್ದಲ್ಲ; ಅವು ಅನುಭವ ಜನ್ಯ. ವಚನಗಳು ಬದುಕಿನ ಪರಿವರ್ತನೆಯ ಮಂತ್ರಗಳು. ಅಂಥ ವಚನಗಳನ್ನು ಬಹುಭಾಷೆಯ ಓದುಗರಿಗೆ ತಲುಪಿಸಲು ತಂತ್ರಜ್ಞಾನದ ನೆರವು ಪಡೆದು ವೆಬ್‌ಸೈಟ್‌ ರೂಪಿಸಲಾಗಿದೆ. ಜಗತ್ತಿಗೆ ಯಾವುದೇ ಭಾಷೆಯಲ್ಲಿ ವಚನಗಳನ್ನು ಓದಬಹುದು, ಅರ್ಥ ತಿಳಿದುಕೊಳ್ಳಬಹುದು. ವಚನಗಳನ್ನು ಹಾಡಿನ ರೂಪದಲ್ಲೂ ಕೇಳಬಹುದು’ ಎಂದರು.

ಸಂಗೀತಗಾರ ಪಂ.ಫಕೀರೇಶ ಕಣವಿ ಅವರಿಗೆ ‘ಡಾ.ಬಿ.ಡಿ.ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಜಗಜ್ಯೊತಿ ಬಸವಣ್ಣನವರ 432 ವಚನಗಳನ್ನು ಹೊಂದಿರುವ ಜಾಲತಾಣ ‘ಸೌಂಡ್ಸ್‌ ಆಫ್‌ ಬಸವ ಡಾಟ್‌ ಇನ್‌’ ಅನ್ನು ಗಣ್ಯರು ಉದ್ಘಾಟಿಸಿದರು.

ಜಾಲತಾಣ ವಿನ್ಯಾಸಗೊಳಿಸಿದ ಮಲ್ಲಿಕಾರ್ಜುನ್ ಎಚ್. ರಾವ್ ಮತ್ತು ವಚನ ವಾಚಿಸಿದ ಮಮತಾ ಎಸ್.ಎನ್. ಅವರನ್ನು ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಭೀಮಣ್ಣ ಖಂಡ್ರೆ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಾಲಿ ಸ್ವಾಗತಿಸಿದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ, ಕಾರ್ಯದರ್ಶಿ ಆನಂದ ಸಿದ್ಧಾಮಣಿ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಯಲಿನಲ್ಲಿ ಬಯಲಾದ ಶತಾಯುಷಿ ಭೀಮಣ್ಣ ಖಂಡ್ರೆ ಅವರದ್ದು ಉಪಮಿಸಲು ಸಾಧ್ಯವಿಲ್ಲದಂಥ ವ್ಯಕ್ತಿತ್ವ. ಶರಣರ ವಚನಗಳಲ್ಲಿ ಅವರನ್ನು ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ ಎಂಬ ಸಾಲಿಗೆ ಸೇರಿದವರು
ಅರವಿಂದ ಜತ್ತಿ ಅಧ್ಯಕ್ಷ ಬೆಂಗಳೂರು ಬಸವ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.