ADVERTISEMENT

ವಾರಾಂತ್ಯ ಲಾಕ್‌ಡೌನ್‌; ಚರ್ಚಿಸಿ ನಿರ್ಧಾರ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 4:07 IST
Last Updated 16 ಏಪ್ರಿಲ್ 2021, 4:07 IST

ಕಲಬುರ್ಗಿ: ‘ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಜತೆಗೆ ಜನತಾ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್‌ಡೌನ್‌ ಮಾಡುವ ಕುರಿತು ಏ. 18ರಂದು ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿ, ನಿರ್ಧರಿಸಲಾಗುವುದು’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಬೆಂಗಳೂರಿಗೆ ಮರಳುವ ಸಂದರ್ಭ ನಗರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಏಕಾಏಕಿ ಲಾಕ್‌ಡೌನ್‌ ಅಥವಾ ವಾರಾಂತ್ಯ ಲಾಕ್‌ಡೌನ್‌ ಘೋಷಣೆ ಮಾಡುವುದಿಲ್ಲ. ಇದಕ್ಕೆ ಎಲ್ಲ ಪಕ್ಷಗಳ ಮುಖಂಡರ ಸಲಹೆ, ಸೂಚನೆಗಳೂ ಬೇಕಾಗಿವೆ. ಹಾಗಾಗಿ, ಸಭೆಯ ಬಳಿಕವೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಅತಿ ಹೆಚ್ಚುತ್ತಿದ್ದು ಕಳವಳಕಾರಿ. ಇದನ್ನು ನಿಯಂತ್ರಣಕ್ಕೆ ತರಲು ಇನ್ನಷ್ಟು ಕಠಿಣ ಕ್ರಮ ಜಾರಿಗೊಳಿಸುವುದು ಅನಿವಾರ್ಯ. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

ADVERTISEMENT

‘ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಮಾದರಿಯ ಕ್ರಮಗಳನ್ನೇ ಅನುಸರಿಸಲು ಚಿಂತನೆ ನಡೆದಿದೆ. ಲಾಕ್‌ಡೌನ್‌ ಆಗಲಿ ಬಿಡಲಿ; ನೀವು ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದೂ ಬೊಮ್ಮಾಯಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.