ADVERTISEMENT

ಬಸವೇಶ್ವರ ಆಸ್ಪತ್ರೆಗೆ ₹5 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ: ಶಶೀಲ್ ನಮೋಶಿ

59 ಬೆಡ್‌ಗಳ ಎಚ್‌ಡಿಯು ಘಟಕ, ನಾಲ್ಕನೇ ಮಹಡಿಯಲ್ಲಿ ಐಸಿಯು ಯೂನಿಟ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:53 IST
Last Updated 22 ನವೆಂಬರ್ 2025, 5:53 IST
<div class="paragraphs"><p>ಶಶೀಲ್ ನಮೋಶಿ</p></div>

ಶಶೀಲ್ ನಮೋಶಿ

   

ಕಲಬುರಗಿ: ನಗರದ ಎಚ್‌ಕೆಇ ಸೊಸೈಟಿಯ ಅತ್ಯಂತ ಹಳೆಯದಾದ ಬಸವೇಶ್ವರ ಆಸ್ಪತ್ರೆಗೆ ₹5 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, 59 ಬೆಡ್‌ಗಳ ಎಚ್‌ಡಿಯು ಘಟಕ, 4000 ಚದರ ಅಡಿಯಲ್ಲಿ ನಾಲ್ಕನೇ ಮಹಡಿಯಲ್ಲಿ ಐಸಿಯು ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ತಿಳಿಸಿದರು.

ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆಗೆ ಹೊಸದಾಗಿ 175 ನರ್ಸಿಂಗ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ಸ್ವಚ್ಛತೆಗಾಗಿ ₹50 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಅತ್ಯಾಧುನಿಕ ಎಲೆಕ್ಟ್ರೋಸರ್ಜಿಕಲ್ ಜನರೇಟರ್‌ಗಳು, ಮಿನಿಮಲಿ ಇಂಡೇಸಿವ್ ಮಾಡ್ಯುಲರ್ ಒಟಿ ವರ್ಕ್‌ಸ್ಟೇಶನ್, ಮಾಲ್ಟಿಪ್ಯಾರಾ ಮಾನಿಟರ್‌ಗಳು, ತುರ್ತು ವರ್ಕ್‌ಸ್ಟೇಶನ್, ಇಸಿಜಿ ಮತ್ತು ಎಬಿಜಿ ಯಂತ್ರಗಳು, ವೆಂಟಿಲೇಟರ್‌ಗಳು, ಸಿರಿಂಜ್ ಪಂಪ್‌ಗಳು, ಅಲ್ಟ್ರಾಸೌಂಡ್ ಯಂತ್ರಗಳು ಮತ್ತು ಸ್ಟೆರೈಲೈಸೇಶನ್ ಉಪಕರಣಗಳು ಸೇರಿವೆ. ಇವುಗಳ ಜೊತೆಗೆ, ದೃಷ್ಟಿ ಪರೀಕ್ಷಾ ಸಾಧನಗಳು ಪ್ರಯೋಗಾಲಯ ಸೆಂಟ್ರಿಫ್ಯೂಜ್ ಮತ್ತು ಇನ್‌ಕ್ಯುಬೇಟರ್‌ಗಳು, ಡೀಪ್ ಫ್ರೀಝರ್, ಲ್ಯಾಮಿನಾರ್ ಏರ್‌ಫ್ಲೋ, ಮೈಕ್ರೋಸ್ಕೋಪ್, ಪೋರ್ಟಬಲ್ ಎಕ್ಸ್-ರೇ ಯಂತ್ರಗಳನ್ನು ಖರೀದಿಸಲಾಗಿದ್ದು, ಇವು ಆಸ್ಪತ್ರೆಯ ಶಸ್ತ್ರಚಿಕಿತ್ಸೆ, ಪರೀಕ್ಷಾ ಮತ್ತು ಕ್ರಿಟಿಕಲ್ ಕೇರ್ ಸಾಮರ್ಥ್ಯವನ್ನು ಮಹತ್ವವಾಗಿ ಹೆಚ್ಚಿಸುತ್ತವೆ’ ಎಂದರು.

ADVERTISEMENT

‘ನಾವು ಅಧಿಕಾರಕ್ಕೆ ಬಂದ ಮೇಲೆ 50 ಮೆಡಿಕಲ್ ಸೀಟುಗಳನ್ನು ಹೆಚ್ಚಿಸಲಾಗಿದೆ. 100ರಿಂದ 200 ನರ್ಸಿಂಗ್ ಸೀಟುಗಳನ್ನು ಹೆಚ್ಚಿಸಲಾಗಿದೆ. ಇನ್ನು ಏಳೆಂಟು ತಿಂಗಳಲ್ಲಿ ಹೊಸ ಕ್ಯಾಥಲ್ಯಾಬ್ ಕಾರ್ಯಾರಂಭ ಮಾಡಲಿದೆ’ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ್ ಪಾಟೀಲ,  ಆಸ್ಪತ್ರೆಯ ಸಂಚಾಲಕ ಡಾ.ಕಿರಣ್ ದೇಶಮುಖ್, ವೈದ್ಯಕೀಯ ಕಾಲೇಜಿನ ಸಂಚಾಲಕ ಡಾ.ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯರಾದ ಡಾ.ನಾಗೇಂದ್ರ ಮಂಠಾಳೆ, ಡಾ.ಅನಿಲಕುಮಾರ ಪಟ್ಟಣ, ನಾಗಣ್ಣ ಘಂಟಿ, ನಿಶಾಂತ್ ಎಲಿ, ಡಾ.ಗುರುಲಿಂಗಪ್ಪ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ ತೇಗನೂರ, ಡೀನ್ ಡಾ.ಶರಣಗೌಡ ಪಾಟೀಲ, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ಡಾ.ಎಂ.ಆರ್.ಪೂಜಾರಿ, ಡಾ.ಸೋಹೈಲ್, ಎಚ್‌ಕೆಇ ಸೊಸೈಟಿ ಹಣಕಾಸು ಅಧಿಕಾರಿ ಜಯಂತ್, ಮಾಧ್ಯಮ ಸಂಯೋಜಕ ಐ.ಕೆ.ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.

ಬಸವೇಶ್ವರ ಆಸ್ಪತ್ರೆಯ ಮುಂಭಾಗದ ಆಧುನೀಕರಣ ಹಾಗೂ ಲ್ಯಾಂಡ್‌ಸ್ಕೇಪಿಂಗ್‌ಗಾಗಿ ₹ 3 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇಡೀ ಆಸ್ಪತ್ರೆಗೆ ಸೋಲಾರ್ ವಿದ್ಯುತ್ ಬಳಸಲು ತೀರ್ಮಾನಿಸಲಾಗಿದೆ
–ಶಶೀಲ್ ಜಿ. ನಮೋಶಿ ಎಚ್‌ಕೆಇ ಸೊಸೈಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.