ADVERTISEMENT

ಕಲಬುರಗಿ: ಡಿ.10ರಂದು ಬಸವೇಶ್ವರ ಮೂರ್ತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:58 IST
Last Updated 8 ಡಿಸೆಂಬರ್ 2025, 5:58 IST
ರೇವಣಸಿದ್ದಯ್ಯ ಬಿ.ಮಠ
ರೇವಣಸಿದ್ದಯ್ಯ ಬಿ.ಮಠ   

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ ಅಶ್ವಾರೂಢ ಮೂರ್ತಿ ಲೋಕಾರ್ಪಣೆ ನಿಮಿತ್ತ ಡಿ.6ರಿಂದ 9ರವರೆಗೆ ಪ್ರವಚನ, ಡಿ.10ರಂದು ಮೂರ್ತಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮೂರ್ತಿ ಉದ್ಘಾಟನಾ ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಬಿ.ಮಠ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿತ್ಯ ಸಂಜೆ 7.30ಕ್ಕೆ ಗಂಗಾಂಬಿಕಾ ಅಕ್ಕ ‘ಶರಣರ ಜೀವನ ಪ್ರವಚನ ನೀಡಲಿದ್ದಾರೆ. ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತರು ಸಮ್ಮುಖ ವಹಿಸುವರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್ಸಿ ಜಗದೇವ ಗುತ್ತೇದಾರ, ಕೆಕೆಆರ್‌ಟಿಸಿ ಅಧ್ಯಕ್ಷ ಅರಣಕುಮಾರ ಎಂ.ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಿ.7ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದೆ’ ಎಂದರು.

‘ಡಿ.10ರಂದು ಬೆಳಿಗ್ಗೆ 8ಕ್ಕೆ ಗ್ರಾಮದಲ್ಲಿ ವಚನ ಸಾಹಿತ್ಯ ಪುಸ್ತಕವನ್ನು ತಲೆಯ ಮೇಲೆ ಹೊತ್ತು ಬಸವೇಶ್ವರರ ಭಾಚಚಿತ್ರದ ಮೆರವಣಿಗೆ ಮಾಡಲಾಗುವುದು. ಬೆಳಿಗ್ಗೆ 11ಕ್ಕೆ 12 ಅಡಿ ಎತ್ತರದ ಬಸವೇಶ್ವರ ಮೂರ್ತಿ ಉದ್ಘಾಟನಾ ಸಮಾರಂಭ ಹಾಗೂ ಧರ್ಮಸಭೆ ನಡೆಯಲಿದ್ದು, ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರನ ಶಿವಾನಂದ ಸ್ವಾಮೀಜಿ, ಭರತನೂರನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಬೀದರ್‌ನ ಪ್ರಭುದೇವ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಧನ್ನೂರ ಉದ್ಘಾಟಿಸುವರು. ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆ ವಹಿಸುವರು’ ಎಂದು ವಿವರಿಸಿದರು.

ADVERTISEMENT

ಪ್ರಮುಖರಾದ ರವೀಂದ್ರ ಶಾಬಾದಿ, ಆರ್.ಜಿ.ಶೆಟಗಾರ, ಸಂಗಮೇಶ ಮಠಪತಿ, ರಾಜಶೇಖರ ಯಂಕಂಚಿ, ಭೀಮಶೆಟ್ಟಿ ಪಾರಾ ಇದ್ದರು.

‘ಕನೇರಿ ಶ್ರೀ ನಾಲಗೆ ಹತೋಟಿಯಲ್ಲಿಟ್ಟುಕೊಳ್ಳಲಿ’

‘ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ತತ್ವದ ಸ್ವಾಮೀಜಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದಿರುವುದು ಮನುಷ್ಯತ್ವ ಇರುವವರಿಗೆ ನಾಚಿಕೆ ಬರುತ್ತದೆ. ಸ್ವಾಮೀಜಿ ತಮ್ಮ ನಾಲಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಸ್ವಾಮೀಜಿಯ ಹಿಂಬಾಲಕರು ಅವರನ್ನು ಕಂಟ್ರೋಲ್‌ ಮಾಡಬೇಕು. ಇಲ್ಲವಾದರೆ ನಾವು ಸ್ವಾಮೀಜಿ ಅವರನ್ನು ಹತೋಟಿಯಲ್ಲಿಡುವ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರವೀಂದ್ರ ಶಾಬಾದಿ ಹೇಳಿದರು.