ADVERTISEMENT

ಕಲಬುರಗಿ: ಬಿಸಿಎಂ ಅಧಿಕಾರಿಗಳಿಂದ ಅಪಪ್ರಚಾರ- ಕೆ.ನೀಲಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 14:00 IST
Last Updated 21 ಡಿಸೆಂಬರ್ 2021, 14:00 IST
ನೀಲಾ ಕೆ
ನೀಲಾ ಕೆ   

ಕಲಬುರಗಿ: ‘ಇತ್ತೀಚೆಗೆ ನಡೆದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಸಮ್ಮೇಳನಕ್ಕೆ ಬರುವ ಜನರಿಗಾಗಿ ಊಟದ ವ್ಯವಸ್ಥೆಗಾಗಿ ಎಲ್ಲರಿಗೂ ಕೇಳುವಂತೆ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರಿಗೆ ಕೇಳಲಾಗಿತ್ತು. ಅದನ್ನೇ ಭ್ರಷ್ಟಾಚಾರವೆಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ನೀಲಾ ಸ್ಪಷ್ಟಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷವು ನೂರಾರು ಜನರಿಂದ ದೇಣಿಗೆ ಸಂಗ್ರಹಿಸಿ ಸಮ್ಮೇಳನ, ಇತರ ಕಾರ್ಯಕ್ರಮಗಳನ್ನು ನಡೆಸುತ್ತದೆ. ದೊಡ್ಡ ದೊಡ್ಡ ಬಂಡವಾಳದಾರರಿಂದ ಪಕ್ಷ ಹಣ ಸಂಗ್ರಹಿಸುವುದಿಲ್ಲ. ಬಿಸಿಎಂ ಇಲಾಖೆ ಅಧಿಕಾರಿಗಳಿಗೂ ಸಮ್ಮೇಳನಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಯ ಒಂದು ಭಾಗವನ್ನು ಭರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತೇ ಹೊರತು ಎಲ್ಲ ಖರ್ಚನ್ನೂ ಅವರೇ ವಹಿಸಿಕೊಳ್ಳಲಿ ಎಂದಿಲ್ಲ. ನಮ್ಮ ಪಕ್ಷದ ಮುಖಂಡರ ಮೊಬೈಲ್‌ನಲ್ಲಿ ದಾಖಲಾಗಿರುವ ಧ್ವನಿ ಮುದ್ರಣವನ್ನುಹಲವು ಕಡೆ ಹಂಚಿಕೆ ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪಕ್ಷದ ಮುಖಂಡರಿಂದ ಯಾವುದೇ ಹಣದ ದುರುಪಯೋಗ ನಡೆದಿಲ್ಲ’ ಎಂದರು.

‘ಪಕ್ಷದ ಮುಖಂಡ ಭೀಮಶೆಟ್ಟಿ ಯಂಪಳ್ಳಿ ಅವರ ಮೇಲೆ ಅಧಿಕಾರಿಗಳು ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಅದಕ್ಕೆ ಯಾವುದೇ ಸ್ಪಷ್ಟವಾದ ಆಧಾರಗಳಿಲ್ಲ. ಒಂದು ವೇಳೆ ಅವರು ಹಿಂದೆ ಗುತ್ತಿಗೆ ನೌಕರರು, ಅಧಿಕಾರಿಗಳ ಬಳಿ ಹಣದ ಬೇಡಿಕೆ ಇಟ್ಟಿದ್ದರೆ ಆ ಕುರಿತು ಆಗಲೇ ದೂರು ಸಲ್ಲಿಸಬಹುದಾಗಿತ್ತು. ಭೀಮಶೆಟ್ಟಿ ಅವರು ಸರ್ಕಾರಿ ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವ ವಹಿಸಿ ನೌಕರರ ಉದ್ಯೋಗ ಭದ್ರತೆಗಾಗಿ ಹಾಗೂ ಇಲಾಖೆಯಲ್ಲಿನ ಲೋಪದೋಷಗಳ ಕುರಿತು ಹೋರಾಟ ನಡೆಸುತ್ತಿರುವುದರಿಂದ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಹಣ ದುರುಪಯೋಗ ಸೇರಿದಂತೆ ಯಾವುದೇ ಬಗೆಯ ಆರೋಪಗಳಲ್ಲಿ ಸತ್ಯಾಂಶ ಕಂಡು ಬಂದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ’ ಎಂದು ಹೇಳಿದರು.

ADVERTISEMENT

ಪಕ್ಷದ ನಗರ ಕಾರ್ಯದರ್ಶಿ ಎಂ.ಬಿ. ಸಜ್ಜನ, ಜಿಲ್ಲಾ ಸಮಿತಿ ಸದಸ್ಯರಾದ ಶರಣಬಸಪ್ಪ ಮಮಶೆಟ್ಟಿ, ಸುಧಾಮ ಧನ್ನಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.