ADVERTISEMENT

‘188 ಗ್ರಾಮಗಳಿಗೆ ಬೆಣ್ಣೆತೊರಾ ನೀರು’

ತಡಕಲ ಕೆರೆಗೆ ಶಾಸಕ ಗುತ್ತೇದಾರ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:11 IST
Last Updated 28 ನವೆಂಬರ್ 2019, 15:11 IST
ಆಳಂದ ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಏರ್ಪಡಿಸಿದ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಕಿಣಿಸುಲ್ತಾನ ಸ್ವಾಮೀಜಿ, ಶಿವಪುತ್ರ ಬೆಳ್ಳೆ ಇದ್ದರು
ಆಳಂದ ತಾಲ್ಲೂಕಿನ ತಡಕಲ ಗ್ರಾಮದಲ್ಲಿ ಏರ್ಪಡಿಸಿದ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಕಿಣಿಸುಲ್ತಾನ ಸ್ವಾಮೀಜಿ, ಶಿವಪುತ್ರ ಬೆಳ್ಳೆ ಇದ್ದರು   

ಆಳಂದ: ತಾಲ್ಲೂಕಿನ 188 ಗ್ರಾಮಗಳಿಗೆ ಶಾಶ್ವತ ನೀರು ಪೂರೈಕೆಗಾಗಿ ಬೆಣ್ಣೆತೊರಾ–ಗಂಡೋರಿ ನಾಲಾದಿಂದ ನೀರು ಸರಬರಾಜು ಮಾಡುವ ದೊಡ್ಡಮಟ್ಟದ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

ತಾಲ್ಲೂಕಿನ ತಡಕಲ ಗ್ರಾಮದಲ್ಲಿನ ಕೆರೆಗಳಿಗೆ ಮಂಗಳವಾರ ಬಾಗಿನ ಅರ್ಪಿಸಿ ನಂತರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಟ್ಟು ₹400 ಕೋಟಿ ವೆಚ್ಚದಲ್ಲಿ ಈ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗುವುದು. ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾಮಗಾರಿ ಆರಂಭಗೊಳ್ಳುವ ವಿಶ್ವಾಸವಿದೆ‘ ಎಂದರು.

ADVERTISEMENT

‘ಧರ್ಮಸ್ಥಳ ಗ್ರಾಮೀಣಾ ಅಭಿವೃದ್ಧಿ ಸಂಘವು ತಾಲ್ಲೂಕಿನಲ್ಲಿ ಉತ್ತಮ ಕಾರ್ಯ ಕೈಗೊಳ್ಳುತ್ತಿದೆ. ಮಹಿಳಾ ಸಂಘ ಸ್ಥಾಪನೆಯಿಂದ ಮಹಿಳೆಯರು ಸ್ವಾವಲಂಬನೆ ಹೊಂದಲು ಸಾಧ್ಯವಿದೆ’ ಎಂದು ಹೇಳಿದರು.

‘ಧರ್ಮಸ್ಥಳ ಸಂಘದ ತಾಲ್ಲೂಕು ಸಂಯೋಜಕ ಎಂ.ಎಸ್.ರೆಡ್ಡಿ ಮಾತನಾಡಿ,‘ತಾಲ್ಲೂಕಿನಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಸಂಘವು ಮುಂದಾಗಿದೆ. ಮಹಿಳಾ ಸಂಘದ ಸ್ಥಾಪನೆ ಜೊತೆಗೆ ಆರ್ಥಿಕ ನೆರವು ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುವುದು’ ಎಂದರು.

ಕಿಣಿಸುಲ್ತಾನದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಸಂಘದ ವಲಯ ಅಧಿಕಾರಿ ಚಂದ್ರು, ಜಿ.ಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ, ತಾ.ಪಂ ಸದಸ್ಯೆ ಕಮಲಾಬಾಯಿ ನ್ಯಾಮಣೆ, ಬಾಬುಗೌಡ ಪಾಟೀಲ, ಶ್ರೀಮಂತ ನ್ಯಾಮಣೆ, ಎಮ್.ಎಸ್.ಬೆಳ್ಳೆ, ಅಪ್ಪಾಸಾಬ ಗುಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.