ADVERTISEMENT

ಆಳಂದ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಬಿಇಒ ಭೇಟಿ 

ಕಿಣಿಸುಲ್ತಾನ, ಖಂಡಾಳ ಗ್ರಾಮದ ವಿದ್ಯಾರ್ಥಿ, ಪಾಲಕರೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:56 IST
Last Updated 19 ಡಿಸೆಂಬರ್ 2025, 5:56 IST
ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು
ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು   

ಆಳಂದ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡೆಸುವ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಅವರು ಸಂಜೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಲಕರು, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಪರೀಕ್ಷೆ ಸಿದ್ಧತೆ ಕುರಿತು ಮಾರ್ಗದರ್ಶನ ಮಾಡುತ್ತಿರುವದು ಸದ್ದಿಲ್ಲದೆ ಸಾಗಿದೆ.

ತಾಲ್ಲೂಕಿನ ಖಂಡಾಳ ಸರ್ಕಾರಿ ಪ್ರೌಢಶಾಲೆ ವ್ಯಾಪ್ತಿಯ ಖಂಡಾಳ, ತಡೋಳಾ, ಜಮಗಾ ಹಾಗೂ ಕಿಣಿಸುಲ್ತಾನ ಸರ್ಕಾರಿ ಪ್ರೌಢ ಶಾಲೆ ವ್ಯಾಪ್ತಿಯ ಗ್ರಾಮಗಳಿಗೆ ಕಳೆದೆರಡು ದಿನಗಳಿಂದ ಸಂಜೆ ಭೇಟಿ ನೀಡಿದ್ದಾರೆ. ರಾತ್ರಿ 8 ಗಂಟೆವರೆಗೆ ಮನೆಗಳಿಗೆ ತೆರಳಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಪಾಲಕರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಸಾಧನೆಗೈಯಲು ತಮ್ಮ ಸಹಕಾರ ಮುಖ್ಯವಾದದು. ವಿದ್ಯಾರ್ಥಿಗಳು ಓದುಲು ಅನುಕೂಲ ಮಾಡಿಕೊಡುವ ಜತೆಯಲ್ಲಿ ಟಿ.ವಿ, ಮೊಬೈಲ್ ಬಳಕೆಗೆ ಅವಕಾಶ ಕೊಡದೇ ಅವರ ಓದು, ಅಭ್ಯಾಸಕ್ಕೆ ನೆರವು ನೀಡಲು ಬಿಇಒ ರಂಗಸ್ವಾಮಿ ಶೆಟ್ಟಿ ಅವರು ಪೋಷಕರಿಗೆ ತಿಳಿಸಿದರು.

ADVERTISEMENT

ಕೊರೆಯುವ ಚಳಿಯಲ್ಲಿಯೂ ಕಿಣಿಸುಲ್ತಾನ ಗ್ರಾಮದಲ್ಲಿನ 40ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಮನೆಗಳಿಗೆ ಬಿಇಒ ರಂಗಸ್ವಾಮಿ ಶೆಟ್ಟಿ, ಎಸ್‌ಎಸ್‌ಎಲ್‌ಸಿ ನೋಡಲ್‌ ಅಧಿಕಾರಿ ಪಂಕಜ ಪಾಟೀಲ, ಮುಖ್ಯಶಿಕ್ಷಕ ಗುಲಾಬ ನಬಿ, ಶಿಕ್ಷಕ ಶಶಿಕುಮಾರ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಮಾಹಿತಿಯನ್ನು ಪಾಲಕರಿಂದ ಪಡೆದುಕೊಂಡರು.

ಮನೆಯಲ್ಲಿ ಇಲ್ಲದ ವಿದ್ಯಾರ್ಥಿಗಳನ್ನು ಕರೆಯಿಸಿ, ಅವರ ಪಾಲಕರ ಮನವೊಲಿಸುವ ಪ್ರಯತ್ನ ಮಾಡಿದ್ದು ಗಮನ ಸೆಳೆಯಿತು. ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ, ಹೊರೆ ಹಾಕದೇ ಶಿಸ್ತುಬದ್ಧ ಓದುವ ಹವ್ಯಾಸ, ಸಿದ್ಧತೆ ಕೈಕೊಳ್ಳಲು ಪಾಲಕರಿಗೆ ಹಾಗೂ ಶಿಕ್ಷಕರಿಗೆ ಬಿಇಒ ಅವರು ತಿಳಿಸಿದರು.

2025ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮೊದಲ ಪರೀಕ್ಷೆಯಲ್ಲಿ ಶೇ 40ರಷ್ಟು ಫಲಿತಾಂಶ ಲಭಿಸಿದ್ದು, ಮೂರು ಪರೀಕ್ಷೆಯಲ್ಲಿ ಶೇ 58ರಷ್ಟು ಮಾತ್ರ ಫಲಿತಾಂಶ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ವಿನೂತನ ಕ್ರಮಕ್ಕೆ ಮುಂದಾಗಿದೆ.

ಪ್ರಸಕ್ತ 6700 ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಗಿದೆ.

ಶಿಕ್ಷಕರಿಗೆ ಪರೀಕ್ಷೆಗೆ ವಿಷಯಾಧಾರಿತ ನೀಲನಕ್ಷೆ ಮತ್ತು ಸ್ಥಳೀಯ ಪರೀಕ್ಷೆ ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿ ಕೈಗೊಂಡು ಮಕ್ಕಳಿಗೆ ಹೆಚ್ಚಿನ ಅಭ್ಯಾಸಕ್ಕೆ ಸಿದ್ಧಗೊಳಿಸುವುದು ಮುಂದುವರದಿದೆ.

ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು
ಗ್ರಾಮೀಣ ಭಾಗದಲ್ಲಿ ಪಾಲಕರು ವಿದ್ಯಾರ್ಥಿಗಳು ಪರೀಕ್ಷೆ ಸಮೀಪಸಿದಾಗ ಮಾತ್ರ ಓದಲು ಆರಂಭಿಸುವರು. ಇದನ್ನು ತಪ್ಪಿಸಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರಲ್ಲಿ ಧೈರ್ಯ ಆತ್ಮವಿಶ್ವಾಸ ಹಾಗೂ ಸಿದ್ಧತೆಯ ವೇಳಾಪಟ್ಟಿ ತಯಾರಿಸಲು ಇದು ಪೂರಕವಾಗಲಿದೆ
ರಂಗಸ್ವಾಮಿ ಶೆಟ್ಟಿ, ಬಿಇಒ ಆಳಂದ
ಬಿಇಒ ಮನೆಗೆ ಭೇಟಿ ನೀಡಿ ನಮ್ಮ ಮಗನ ಪರೀಕ್ಷೆ ಸಿದ್ಧತೆ ಕುರಿತು ಪರಿಶೀಲಿಸಿದ್ದು ವಿಶೇಷವಾಗಿ ನಮ್ಮ ಜವಾಬ್ದಾರಿ ತಿಳಿಸಿದಲ್ಲದೆ ಸ್ಥಳದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಕುರಿತು ಬಗೆಹರಿಸಲು ಶಿಕ್ಷಕರಿಗೆ ಸೂಚಿಸಿದರು
ಲಕ್ಷ್ಮಿಪುತ್ರ ತೆಲ್ಲೂರು ಪಾಲಕ ಕಿಣಿಸುಲ್ತಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.