ADVERTISEMENT

ಚಿಂಚೋಳಿ | ಮಿರಿಯಾಣ: ಒಂದೆಡೆ ಲೀಸ್, ಗಣಿಗಾರಿಕೆ ಮತ್ತೊಂದೆಡೆ!

ಅಕ್ರಮ ಗಣಿ ಕುಣಿಕೆ; 62 ಮಂದಿಗೆ ಜೆಸ್ಕಾಂ ನೋಟಿಸ್‌

ಜಗನ್ನಾಥ ಡಿ ಶೇರಿಕಾರ, ಚಿಂಚೋಳಿ
Published 14 ಜನವರಿ 2025, 5:06 IST
Last Updated 14 ಜನವರಿ 2025, 5:06 IST
<div class="paragraphs"><p>ಮಿರಿಯಾಣದಲ್ಲಿ ಕಟಿಂಗ್‌ಗೆ ಸಿದ್ಧವಾದ ಕಲ್ಲು ಬಂಡೆ</p></div>

ಮಿರಿಯಾಣದಲ್ಲಿ ಕಟಿಂಗ್‌ಗೆ ಸಿದ್ಧವಾದ ಕಲ್ಲು ಬಂಡೆ

   

ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಸುತ್ತಲೂ ಅವ್ಯಾಹತವಾಗಿ ನಡೆಯುತ್ತಿರುವ ಶಹಾಬಾದ್‌ ಶಿಲೆಯ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಾನಿ ಸಂಭವಿಸುತ್ತಿದ್ದರೆ, ಅಧಿಕಾರಿಗಳು ಮಾತ್ರ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಇಲ್ಲಿನ ಗಣಿ ಧಣಿಗಳು ಸರ್ಕಾರಕ್ಕೆ ರಾಜಧನ ವಂಚಿಸುವುದರ ಜತೆಗೆ ವಿದ್ಯುತ್ ಬಿಲ್‌ ಕೂಡ ವಂಚಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಲೀಸ್ ಪಡೆಯದೇ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ರಾಜಧನ ಭರಿಸುವುದಿಲ್ಲ. ಅನಧಿಕೃತವಾಗಿ ವಿದ್ಯುತ್ ಪರಿವರ್ತಕ ಅಳವಡಿಸಿಕೊಂಡು ತಂತಿ ಹಾಕಿ ವಿದ್ಯುತ್ ಅನ್ನು ಕಳ್ಳತನದಿಂದ ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗುತ್ತಿದೆ.

ADVERTISEMENT

‘ಲೀಸ್ ಪಡೆದು ಗಣಿಗಾರಿಕೆ ನಡೆಸುವ ಉದ್ಯಮಿಗಳು ರಾಜಧನ ನಿಯಮಾನುಸಾರ ಭರಿಸುವುದಿಲ್ಲ. ಇದನ್ನು ಪರಿಶೀಲಿಸಲು ಮಿರಿಯಾಣ ಗಡಿಯಲ್ಲಿ ಸ್ಥಾಪಿಸಿದ್ದ ಚೆಕ್‌ಪೋಸ್ಟ್ ಮುಚ್ಚಲಾಗಿದೆ. ಇದರಿಂದ ಈಗ ರಾಜಧನದ ರಸೀತಿ ಇಲ್ಲದೇ ವಾಹನಗಳು ನಿರಾತಂಕವಾಗಿ ಓಡಾಡುವಂತಾಗಿದೆ’ ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ದೂರಿದ್ದಾರೆ.

‘ಇಲ್ಲಿ ಲೀಸ್ ಒಂದು ಕಡೆ ಪಡೆದು, ಗಣಿಗಾರಿಕೆ ಮತ್ತೊಂದು ಕಡೆ ನಡೆಸುವುದು. ದಶಕದ ಹಿಂದೆ ಲೀಸ್ ಪಡೆದು ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಪರಿವರ್ತಕವನ್ನೇ ಬೇರೆಡೆ ಸ್ಥಳಾಂತರಿಸಿಕೊಂಡು ಗಣಿಗಾರಿಕೆ ನಡೆಸುವುದು ಸರ್ವೆ ಸಾಮಾನ್ಯವಾಗಿದೆ. ಮಿರಿಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಕಡೆ ಗಣಿಗಾರಿಕೆ ನಡೆಸಲಾಗಿದೆ. ಪ್ರಸ್ತುತ 50ಕ್ಕೂ ಹೆಚ್ಚು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಅರ್ಧದಷ್ಟು ಗಣಿಗಳು ಅನಧಿಕೃತವಾಗಿದ್ದು, ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ’ ಎಂಬ ಆರೋಪಗಳಿವೆ.

ಗಣಿ ಉದ್ಯಮ ಮಳೆಗಾಲದಲ್ಲಿ ಮಂದಗತಿಯಲ್ಲಿ ಸಾಗಿದರೆ ಉಳಿದ ಸಮಯದಲ್ಲಿ ಬಿರುಸಿನಿಂದ ನಡೆಯುತ್ತದೆ. ಅಧಿಕಾರಿಗಳು ದಾಳಿ ನಡೆಸಲು ಇಲ್ಲಿಗೆ ಬರುತ್ತಿದ್ದರೆ, ಗಣಿಧಣಿಗಳಿಗೆ ಮೊದಲೇ ಮಾಹಿತಿ ಲಭಿಸುತ್ತದೆ. ಇದರಿಂದ ಅಂತಹ ಸಂದರ್ಭದಲ್ಲಿ ಒಂದೆರಡು ದಿನ ಗಣಿಗಾರಿಕೆ ಸ್ಥಗಿತಗೊಳಿಸಲಾಗುತ್ತಿದೆ.

ಮಿರಿಯಾಣ ಸುತ್ತಲಿನ ಪ್ರದೇಶ ಗಣಿ ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಇದರಿಂದ ಇಲ್ಲಿಗೆ 24 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಯಿದೆ. ಖಾಸಗಿಯಾಗಿ ವಿದ್ಯುತ್ ಪರಿವರ್ತಕ ಖರೀದಿಸಿ ತಂದು ಕೊಂಡಿ ಹಾಕಿಕೊಂಡು ನಡೆಸುತ್ತಿದ್ದಾರೆ. ಹಲವು ಬಾರಿ ಜೆಸ್ಕಾಂ ದಾಳಿ ನಡೆಸಿ ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿ ಜಪ್ತಿ ಮಾಡಿದ್ದಾರೆ. ಆದರೂ ಅಕ್ರಮ ಗಣಿಗಾರಿಕೆಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ.

ಗಣಿಗಾರಿಕೆಗೆ ವಿದ್ಯುತ್ ಸಂಪರ್ಕ ಪಡೆದ 62 ಮಂದಿಗೆ ಗಣಿಗಾರಿಕೆ ಲೀಸ್ ಪ್ರತಿ ಸಲ್ಲಿಸುವಂತೆ ಜೆಸ್ಕಾಂ ಅಧೀನ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿ 15 ದಿನ ಕಾಲವಕಾಶ ನೀಡಲಾಗಿದೆ
-ಪರಮೇಶ್ವರ ಬಿರಾದಾರ, ಎಇ ಜೆಸ್ಕಾಂ ವಿಭಾಗ ಸೇಡಂ
ಮಿರಿಯಾಣದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಉಪ ನಿರ್ದೆಶಕರಿಗೆ ದೂರು ಸಲ್ಲಿಸಿದ್ದೇನೆ. ಕಾಲಮಿತಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ
-ಸಂಜೀವನ ಯಾಕಾಪುರ, ಜೆಡಿಎಸ್ ಮುಖಂಡ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.