ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಬುಧವಾರ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ, ಕಾರ್ಪೋರೇಟ್ ಪರವಾದ ನೀತಿಗಳನ್ನು ವಿರೋಧಿಸಿ, ನಾಲ್ಕು ಕಾನೂನು ಸಂಹಿತೆಗಳನ್ನು ವಾಪಸ್ ಪಡೆಯುವುದು ಸೇರಿದಂತೆ 22 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.
ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ ಹಸಿರು ಸೈನ್ಯ, ದಲಿತ ಸಂಘಟನೆ ಸಮಿತಿ ಅಂಬೇಡ್ಕರ್ ವಾದ, ಡಿಎಸ್‌ಎಸ್ ಮಾವಳ್ಳಿ ಶಂಕರ್ ಬಣ, ಅಂಗನವಾಡಿ ನೌಕರರ ಸಂಘ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು), ಗ್ರಾಮ ಪಂಚಾಯಿತಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಮೆಡಿಕಲ್ ರೆಪ್ರೆಸೆಂಟೇಟಿವ್ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿದವು.
ಜಗತ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಕಾರರು ತಮ್ಮ ಸಂಘಟನೆಗಳ ಬಾವುಟ ಹಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ಜಾರಿಯನ್ನು ರದ್ದು ಮಾಡಿ, ದುಡಿಯುವ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಕೊಡಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದರು.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಖಾತ್ರಿ ಕಾನೂನು ಜಾರಿ ಮಾಡಬೇಕು. ರೈತರ ಸರಣಿ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಬಾರದು. 2020 ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ರೈತರ ಬೆಳೆ ವಿಮೆ ಹಣ ಬಿಡುಗಡೆ ಮಾಡಿ, ರೈತರ ಸಾಲ ಮನ್ನಾ ಮಾಡಬೇಕು. ಸರ್ಕಾರದ ಗೈರಾಣಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುವುದನ್ನು ತಡೆದು, ಹಕ್ಕು ಪತ್ರಗಳನ್ನು ಕೊಡಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು. ಗುತ್ತಿಗೆ, ಹೊರಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ ನೇಮಕಾತಿಯನ್ನು ನಿಲ್ಲಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮೀನಾಕ್ಷಿ ಬಾಳಿ, ಭೀಮಾಶಂಕರ ಮಾಡಿಯಾಳ, ಎಸ್.ಆರ್.ಕೊಲ್ಲೂರ, ಎಸ್.ಬಿ. ಮಹೇಶ್, ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬೂರ, ಮಲ್ಲಿಕಾರ್ಜುನ ಪಾಟೀಲ, ಮಹೇಶಕುಮಾರ ರಾಠೋಡ, ಮೇಘರಾಜ ಕಠಾರೆ, ಗೌರಮ್ಮ ಪಿ. ಪಾಟೀಲ, ಶಾಂತಾ ಎನ್. ಘಂಟೆ, ಸಲಿಂ ಅಹಮದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಲಬುರಗಿ: ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಕರೆ ನೀಡಿದ್ದ ಮುಷ್ಕರಕ್ಕೆ ಎಸ್ಸಿ, ಎಸ್ಟಿ ಅಸೋಸಿಯೇಷನ್ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬೆಂಬಲ ಸೂಚಿಸಿ ಬುಧವಾರ ಪ್ರತಿಭಟನೆ ಮಾಡಿದರು.
ನಗರದ ಕುಸನೂರ ರಸ್ತೆಯಲ್ಲಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಮುಂಡರು, ‘ಐಪಿಒ ಪ್ರಸ್ತಾವ ಹಿಂಪಡೆಯಬೇಕು, ಗ್ರಾಮೀಣ ಬ್ಯಾಂಕ್ ಖಾಸಗೀಕರಣ ಕೈ ಬಿಡಬೇಕು, ಪ್ರೇರಕ 28 ರಾಜ್ಯಗಳಲ್ಲಿ ಇರುವ ಗ್ರಾಮೀಣ ಬ್ಯಾಂಕ್‌ಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮಾಡಬೇಕು, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸುಮಾರು 30,000ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ವೇಳೆ ಶಿವಕುಮಾರ ಬಗಲೂರ, ರಾಹುಲ್ ಹರವಾಳ, ಎ.ಎಲ್.ಉಪಳಾಂವಕರ್, ಸಿದ್ದಣ್ಣ, ವಿಶ್ವನಾಥ ರೆಡ್ಡಿ, ಕಿರಣ ಭಾವಿಮನಿ, ಕೇಶವ ರಾಠೋಡ, ಅನಿಲ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಬಸವರಾಜ ತೆಗ್ಗಿನ ಸೇರಿದಂತೆ ಪ್ರಮುಖರು ಇದ್ದರು.
‘ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಮ್ ನೌಕರರಿಗೆ ರಾಷ್ಟ್ರವ್ಯಾಪಿ ₹ 26 ಸಾವಿರ ಹಾಗೂ ರಾಜ್ಯವ್ಯಾಪಿ ₹ 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಎಲ್ಲಾ ವಿಭಾಗದ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹ 9,000 ಪಿಂಚಣಿ, ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು. ಹಳೇ ಪಿಂಚಣಿಯನ್ನೇ ಮರು ಸ್ಥಾಪಿಸಬೇಕು. ದಿನಬಳಕೆ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಸಾರ್ವಜನಿಕ ಉದ್ಯಮ, ನಿಗಮ ಮತ್ತು ಇಲಾಖೆ ಖಾಸಗೀಕರಣ ನಿಲ್ಲಿಸಬೇಕು’ ಎಂದರು.
ರೈತರು ಬೆಳೆದ ಅನ್ನವನ್ನು ತಿಂದು, ಕಾರ್ಮಿಕರ ಬೆವರಿನಿಂದ ದುಡ್ಡು ಮಾಡಿಕೊಂಡು ಅವರ ವಿರುದ್ಧವೇ ಕಾನೂನುಗಳು ತಂದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಅಧಿಕಾರದಿಂದ ಇಳಿಸುತ್ತೇವೆಕೆ.ನೀಲಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೈಕ್ರೊ ಫೈನಾನ್ಸ್ ಹಾಗೂ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿ, ಬಡ್ಡಿ ರಹಿತವಾಗಿ ಸಾಲವನ್ನು ನೀಡಬೇಕುಮೌಲಾ ಮುಲ್ಲಾ, ಕಿಸಾನ್ ಸಭಾ ರಾಜ್ಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.