ADVERTISEMENT

ಬರಗೂರು ವಿರುದ್ಧ ದುರುದ್ದೇಶದ ದೂರು: ಅಶ್ವಿನಿ ಮದನಕರ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 3:13 IST
Last Updated 2 ಸೆಪ್ಟೆಂಬರ್ 2022, 3:13 IST
ಅಶ್ವಿನಿ ಮದನಕರ
ಅಶ್ವಿನಿ ಮದನಕರ   

ಕಲಬುರಗಿ: ‘ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಮೇಲೆ ದುರುದ್ದೇಶದಿಂದ ದೂರು ನೀಡಲಾಗಿದ್ದು, ಪಠ್ಯಪುಸ್ತಕ ಪ‍ರಿಷ್ಕರಣೆಯಲ್ಲಿ ಸೋತ ಬಿಜೆಪಿ ಸರ್ಕಾರವು ಬರಗೂರು ವಿರುದ್ಧ ದ್ವೇಷ ಕಾರುತ್ತಿದೆ’ ಎಂದು ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕಿ ಅಶ್ವಿನಿ ಮದನಕರ್ ಟೀಕಿಸಿದ್ದಾರೆ.

‘ಬರಗೂರರು ತಮ್ಮ ಕಾದಂಬರಿ ಭರತ್ ನಗರಿಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ವದಂತಿ ಹಬ್ಬಿಸಿ, ತೇಜೋವಧೆ ಮಾಡುವ ಹುನ್ನಾರದಿಂದ ಸುಳ್ಳು ಕೇಸು ದಾಖಲಿಸಲಾಗಿದೆ. ದೂರು ನೀಡುವ ಧಾವಂತದಲ್ಲಿ ಬಿಜೆಪಿ ಸರ್ಕಾರದವರು ಇನ್ನೊಂದು ಹೊಸ ಬದಲಾವಣೆ ಗಮನಿಸಿಲ್ಲ. ಕೆಲ ತಿಂಗಳ ಹಿಂದೆ ಸಮಗ್ರ ಸಾಹಿತ್ಯ ಸಂಪುಟಗಳನ್ನು ಹೊರತಂದಿರುವ ಬರಗೂರರು ಅದರಲ್ಲಿ ಪರಿಷ್ಕರಣೆಯನ್ನೂ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘40 ವರ್ಷಗಳ ಹಿಂದಿನ ಸಾಲು ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದು ಅಪ್ರಸ್ತುತ. ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಹುನ್ನಾರವಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.