ಅಫಜಲಪುರ: ಸುಮಾರು ₹ 916 ಕೋಟಿ ವೆಚ್ಚದಲ್ಲಿ 60 ಸಾವಿರ ಎಕರೆಗೆ ನೀರುಣಿಸುವ ಸೊನ್ನ ಭೀಮಾ ಏತ ನೀರಾವರಿ ಯೋಜನೆ ಮುಗಿದು 20 ವರ್ಷ ಕಳೆದಿವೆ. ಈವರೆಗೂ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಲ್ಲ. ಆದರೆ ಸರ್ಕಾರಿ ಅಧಿಕಾರಿಗಳು, ‘ಭೀಮಾ ಏತ ನೀರಾವರಿ ಯೋಜನೆ ಯಶಸ್ವಿಯಾಗಿದೆ’ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ತಾಲ್ಲೂಕಿನ ಸೊನ್ನ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ, 3.16 ಟಿಎಂಸಿ ನೀರನ್ನು ಎರಡು ಕಾಲುವೆಗಳ ಮೂಲಕ 60 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಇಲ್ಲಿಯವರೆಗೆ ₹916 ಕೋಟಿ ಖರ್ಚುಮಾಡಲಾಗಿದೆ. ಭೀಮಾ ಬ್ಯಾರೇಜ್‌ನಿಂದ ಬಳುಂಡಗಿ ಮತ್ತು ಅಳ್ಳಗಿ(ಬಿ) ಗ್ರಾಮದ ಹತ್ತಿರ ಏತಗಳನ್ನು ನಿರ್ಮಿಸಿ, 29 ಮೀಟರ್ ನೀರು ಎತ್ತಿ ಕಾಲುವೆಗಳ ಮುಖಾಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಬಳುಂಡಗಿ ಏತ ನೀರಾವರಿಯಿಂದ 41,300, ಅಳ್ಳಗಿ(ಬಿ) ಏತನೀರಾವರಿಯಿಂದ 18,700 ಎಕರೆ ಪ್ರದೇಶಕ್ಕೆ ನೀರು ಕಲ್ಪಿಸುವ ಉದ್ದೇಶದಿಂದ ಕಾಲುವೆ ನಿರ್ಮಿಸಲಾಗಿದೆ. ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಹಾಗೂ ಅಳ್ಳಗಿ(ಬಿ) ಏತ ನೀರಾವರಿ 11 ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮುಖಾಂತರ ನೀರು ಪೂರೈಸಬೇಕು. ಯೋಜನೆ ಯಶಸ್ವಿಯಾದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜತಗೆ ವರ್ಷದಲ್ಲಿ ಎರಡು ಬೆಳೆ ಬೆಳೆದುಕೊಳ್ಳಬಹುದು. ಕಾಲುವೆಗೆ ನೀರು ಹರಿಸುವಂತೆ ನಿರಂತರ ಹೋರಾಟ ನಡೆದಿದೆ. ಆದರೆ ಕರ್ನಾಟಕ ನೀರಾವರಿ ನಿಗಮದವರು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಭೀಮಾ ಬ್ಯಾರೇಜಿನಲ್ಲಿ ನೀರಿದ್ದರೂ ರೈತರಿಗೆ ಬಳಕೆಗೆ ಸಿಗುತ್ತಿಲ್ಲ.
‘ಯೋಜನೆಯಿಂದ ಕಾಲುವೆಗಳಿಗೆ ಈವರೆಗೂ ನೀರು ಹರಿದಿಲ್ಲ. ಕಾಲುವೆ ಹೂಳು ತೆಗೆಯುವಲ್ಲಿ ಅವ್ಯವಹಾರವಾಗಿದೆ. ಹೂಳು ತುಂಬಿದ್ದರಿಂದ ನೀರು ಮುಂದೆ ಹೋಗುತ್ತಿಲ್ಲ. ಭೀಮಾ ಏತ ನೀರಾವರಿ ಉಪ ವಿಭಾಗದ ಎಂಜಿನಿಯರ್‌ಗಳು ಸೇರಿ 80ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ಅವರಿಗಾಗಿ ಹಣ ಖರ್ಚು ಮಾಡಿ ಕಚೇರಿ, ವಾಸ ಮಾಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಬಳಕೆಯಾಗುತ್ತಿಲ್ಲ. ರೈತರು ನಿತ್ಯ ಕೆಲಸಕ್ಕೆ ಬರುತ್ತಾರೆ. ಅದರ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮಕೈಗೊಳ್ಳಬೇಕು’ ಎಂದರು.
ಸಿದ್ಧನೂರು ರೈತ ಮುಖಂಡ ಭೀಮಶಾ ಹಿಪ್ಪರಗಿ, ಶೇಖರ ಹೇರೂರ ಮಾತನಾಡಿ, ‘ಒಂದು ತಿಂಗಳಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಈವರೆಗೂ ನೀರು ಕೊನೆ ಗ್ರಾಮ ತಲುಪಿಲ್ಲ. ನೀರು ಹರಿಯದ ಕಾಲುವೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಕಾಲುವೆಗಳಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕೋಟೆ ಮಾತನಾಡಿ, ‘ಭೀಮಾ ಕಾಲುವೆಗೆ 2025ರ ಏಪ್ರಿಲ್‌ವರೆಗೆ ನೀರು ಹರಿಸಬೇಕು. ಕಾಲುವೆ ಕಾಮಗಾರಿ ಕಳಪೆ ಮಾಡಿದ ಗುತ್ತಿಗೆದಾರರ ಪರವಾನಗಿ ರದ್ದು ಪಡಿಸಿ, ಕಪ್ಪು ಪಟ್ಟಿಗೆ ಸೇರಿಸಬೇಕು. ಯೋಜನೆ ಅಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಮತ್ತು ಮುಳುಗಡೆಯಾದ ಗ್ರಾಮದ ಜನರಿಗೆ ಸಮರ್ಪಕವಾದ ಪುನರ್ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸೊನ್ನ ಭಿಮಾನದಿ ಏತ ನೀರಾವರಿ ಯೋಜನೆಯಿಂದ 43 ಗ್ರಾಮಗಳ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲು ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕುಶ್ರೀಮಂತ ಬಿರಾದಾರ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ
ಸೊನ್ನ ಭೀಮಾನದಿ ಬ್ಯಾರೇಜ್ ಕಂ ಬ್ರಿಡ್ಜ್‌ನಲ್ಲಿ ನೀರು ಸಂಗ್ರವಾಗಿದ್ದರೂ ಅವೈಜ್ಞಾನಿಕ ಕಾಲುವೆ ನಿರ್ಮಾಣದಿಂದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲಗುರು ಚಾಂದಕೋಟೆ ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.