ಕಲಬುರಗಿ: ‘ಮಹಾರಾಷ್ಟ್ರದ ಉಜ್ಜನಿ, ವೀರ ಭಟ್ಕರ್ ಜಲಾಶಯದಿಂದ ಭೀಮಾನದಿಗೆ 1.25 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ 40 ಹಳ್ಳಿಗಳಲ್ಲಿ ಭೀಮಾ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ನಿರಂತರ ನಿಗಾ ಇಡಬೇಕು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯಾವುದೇ ಕಾರಣಕ್ಕೂ ಜನ-ಜಾನುವಾರುಗಳು ಪ್ರವಾಹದಿಂದಾಗಿ ತೊಂದರೆ ಅನುಭವಿಸಬಾರದು. ಅಗತ್ಯ ಬಿದ್ದರೆ ಸುರಕ್ಷಿತ ಸ್ಥಳಗಳಿಗೆ ಎಲ್ಲರನ್ನೂ ಸ್ಥಳಾಂತರಿಸಿ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸೊನ್ನ ಬ್ಯಾರೇಜ್ ನದಿ ಪಾತ್ರದ ಜನರು ಹಾಗೂ ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮುನ್ನೆಚ್ಚರಿಕೆ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.
‘ಪ್ರವಾಹದಿಂದ ಉಂಟಾಗುವ ಸಾಧ್ಯತೆ ಇರುವಲ್ಲಿ ಪರಿಸ್ಥಿಯನ್ನು ನಿಭಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.