ADVERTISEMENT

ಚಿತ್ತಾಪುರ: ‘ಭೀಮ ನಡೆ’ ಯಶಸ್ವಿ, ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 17:42 IST
Last Updated 1 ಡಿಸೆಂಬರ್ 2025, 17:42 IST
<div class="paragraphs"><p>ಚಿತ್ತಾಪುರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶದಲ್ಲಿ ಸಮತಾ ಸೈನಿಕ ದಳದವರು ಭಾಗವಹಿಸಿದ್ದರು &nbsp;</p></div>

ಚಿತ್ತಾಪುರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶದಲ್ಲಿ ಸಮತಾ ಸೈನಿಕ ದಳದವರು ಭಾಗವಹಿಸಿದ್ದರು  

   

 – ಚಿತ್ರ: ತಾಜುದ್ದೀನ್‌ ಆಜಾದ್

ಚಿತ್ತಾಪುರ (ಕಲಬುರಗಿ ಜಿಲ್ಲೆ): ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ‘ಭೀಮನಡೆ’ ಮೆರವಣಿಗೆ ಹಾಗೂ ಸಂವಿಧಾನ ಸಮಾವೇಶ ಶಾಂತಿಯುತವಾಗಿ ಜರುಗಿತು.

ADVERTISEMENT

ನ.16ರಂದು ಆರ್‌ಎಸ್‌ಎಸ್‌ ನಡೆಸಿದ್ದ ಪಥಸಂಚಲನಕ್ಕೆ ಪರ್ಯಾಯ ಎಂಬಂತೆ ನಡೆದ ಈ ‘ಭೀಮ ನಡೆ’ಯು ‘ಸರ್ವಧರ್ಮ ಸಮನ್ವಯ’ದ ಸಂದೇಶ ವನ್ನೂ ಸಾರಿತು.

ಪಟ್ಟಣದ ಚಿತ್ತಾವಲಿ ಚೌಕ್‌ನಿಂದ ಶುರುವಾದ ಮೆರವಣಿಗೆ ಪ್ರಮುಖ ರಸ್ತೆ, ಚೌಕಗಳ ಮೂಲಕ ಒಂದೂವರೆ ಕಿ.ಮೀ.ನಷ್ಟು ಸಾಗಿ ಸಮಾವೇಶ ನಡೆದ ಬಜಾಜ್ ಕಲ್ಯಾಣ ಮಂಟಪ ತಲುಪಿತು. 

ಬಿಳಿ ಅಂಗಿ, ಖಾಕಿ ಪ್ಯಾಂಟು, ನೀಲಿ ಟೊಪ್ಪಿಗೆ ಧರಿಸಿದ್ದ ಸಮತಾ ಸೈನಿಕದಳದ 500ಕ್ಕೂ ಅಧಿಕ ಕಾರ್ಯಕರ್ತರು ಶಿಸ್ತಿನಿಂದ ಹೆಜ್ಜೆ ಹಾಕಿದರು. ಮಹಿಳೆಯರು ಸೇರಿದಂತೆ ಸಾರ್ವಜನಿಕರು ಪುಷ್ಪವೃಷ್ಟಿಗೈದು ಗೌರವಿಸಿದರು. 45 ನಿಮಿಷಗಳಲ್ಲಿ ಮೆರವಣಿಗೆ ಸಂಪನ್ನಗೊಂಡಿತು.

ಮುಂದೆ ಸಾಗಿದ ಬ್ಯಾಂಡ್‌ ಅನ್ನು ಸಮತಾ ಸೈನಿಕದಳದ ಕಾರ್ಯ ಕರ್ತರು ಹಿಂಬಾಲಿಸಿದರು. ಸಂವಿಧಾನದ ಮಹತ್ವವನ್ನು ಸಾರುವ ಯತ್ನವು ಮೆರವಣಿಗೆಯುದ್ದಕ್ಕೂ ನಡೆಯಿತು.

ಬಳಿಕ ಪುಷ್ಪಾಲಂಕೃತ ರಥದಲ್ಲಿ ‘ತೆರೆದಿಟ್ಟ ಸಂವಿಧಾನ ‍ಪೀಠಿಕೆ’ಯ ಸ್ತಬ್ಧಚಿತ್ರ ಸಾಗಿತು. ಡಾ.ಬಾಬಾಸಾಹೇಬ್‌ ಅಂಬೇಡ್ಕರ್, ವಿಶ್ವಗುರು ಬಸವಣ್ಣ, ಅಂಬಿಗರ ಚೌಡಯ್ಯ, ಶಿವಾಜಿ ಮಹಾರಾಜ್‌, ಟಿಪ್ಪು ಸುಲ್ತಾನ್‌, ಹರಳಯ್ಯ, ಸರ್ವಜ್ಞ, ಸಂತ ಸೇವಾಲಾಲ್‌, ವಿಶ್ವಕರ್ಮ ಮಹರ್ಷಿ ಸೇರಿ ವಿವಿಧ ಮಹನೀಯರ ಭಾವಚಿತ್ರಗಳನ್ನು ಹೊತ್ತ, ತ್ರಿವರ್ಣಧ್ವಜ ಸಹಿತ ಆಟೊಗಳು ಸಾಗಿದವು.

ಬಳಿಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಿತು. ಸಂವಿಧಾನ ಪರ ಭಾಷಣಗಳು ಅನುರಣಿಸಿದವು. ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

‘ಸಂವಿಧಾನ ಒಪ್ಪದವರಿಗೆ ಇಲ್ಲೇನು ಕೆಲಸ?’
‘ಸಂವಿಧಾನ ಒಪ್ಪದವರು ಹೇಗೆ ದೇಶಭಕ್ತರಾಗುತ್ತಾರೆ’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು. ಇಲ್ಲಿ ನಡೆದ ‘ಸಂವಿಧಾನ ಸಮಾವೇಶ’ ಉದ್ಘಾಟಿಸಿದ ಅವರು, ‘ದೇಶದಲ್ಲಿ ಸಂಸತ್ತಿಗಿಂತಲೂ ಸಂವಿಧಾನ ದೊಡ್ಡದು. ಸಂವಿಧಾನ ಒಪ್ಪದವರಿಗೆ ದೇಶದಲ್ಲಿ ಕೆಲಸವೇನಿದೆ’ ಎಂದು ಆರ್‌ಎಸ್‌ಎಸ್ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು. ‘ಸಂವಿಧಾನದ ಆಶಯ ಸಂಘರ್ಷವಲ್ಲ, ಸಾಮರಸ್ಯ. ಬಹುಸಂಖ್ಯಾತರಿಗೆ ಧರ್ಮವಲ್ಲ, ದೇಶ ಮುಖ್ಯ. ಧರ್ಮ, ಜಾತಿಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುವವರು ದೇಶಭಕ್ತರಲ್ಲ’ ಎಂದೂ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.