ಕಲಬುರಗಿ ಜಿಲ್ಲೆಯ ವಾಡಿ ಸಮೀಪದ ಕಡಬೂರ ಗ್ರಾಮದಲ್ಲಿ ಭೀಮಾನದಿ ಪ್ರವಾಹದಿಂದ ತತ್ತರಿಸಿರುವ ಗ್ರಾಮಸ್ಥರು ತಮ್ಮ ಸಾಮಾನುಗಳನ್ನು ಮೀನುಗಾರರ ತೆಪ್ಪ ಬಳಸಿ ಸಾಗಿಸಿದರು
ವಾಡಿ(ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮವು ಉಕ್ಕಿ ಹರಿಯುತ್ತಿರುವ ಭೀಮಾನದಿಯ ಪ್ರವಾಹಕ್ಕೆ ಅಕ್ಷರಶಃ ನಲುಗಿದೆ.
ಗ್ರಾಮ ಹೊಕ್ಕ ನದಿ ನೀರು ಜನರ ಬೀದಿಗೆ ತಂದು ನಿಲ್ಲಿಸಿದೆ. ನೀರಿನ ಅಪಾಯ ಅರಿತು ಇಡೀ ಗ್ರಾಮಸ್ಥರು ನಿದ್ದೆಮರೆತು ಜಾಗರಣೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನರು ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಕೆಲವು ಮನೆಗಳನ್ನು ಸಂಪೂರ್ಣ ಮುಳುಗಿಸಿದ್ದರೆ ಇನ್ನು ಕೆಲವು ಮನೆಗಳ ಚಾವಣಿ ಮುಟ್ಟಿದೆ. ಜನರು ಗ್ರಾಮದಲ್ಲಿ ನಡೆದಾಡಲು ಸ್ಥಳೀಯ ಮೀನುಗಾರರ ತೆಪ್ಪಗಳನ್ನು ಬಳಸುತ್ತಿದ್ದಾರೆ.
ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರು ಗ್ರಾಮಕ್ಕೆ ಹೊಕ್ಕಿದೆ ಎನ್ನುತ್ತಾರೆ ಸ್ಥಳೀಯರು. ಈಶ್ವರ ದೇವಸ್ಥಾನಕ್ಕೆ ಮತ್ತು ಹೊಸ ಬಡಾವಣೆಯ ಶಾಲೆಗೆ ಜನರು ತಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಿರಂತರವಾಗಿ ಪ್ರವಾಹ ಹೆಚ್ಚುತ್ತಿದ್ದು ಮುಂದೇನು ಎನ್ನುವ ಚಿಂತೆಯಲ್ಲಿ ಸ್ಥಳೀಯರು ಮುಳುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.