
ಕಲಬುರಗಿ: ‘ಭೋವಿ ಸಮುದಾಯದ ವಿರುದ್ಧ ಕಲಬುರಗಿ ಜಿಲ್ಲಾ ವಡ್ಡರ ಸಮಾಜದ ಕೆಲವು ನಾಯಕರು ಸುಳ್ಳು ಆರೋಪ ಮತ್ತು ನಿಂದನೆ ಮಾಡಿದ್ದಾರೆ’ ಎಂದು ಅಖಿಲ ಕರ್ನಾಟಕ ಭೋವಿ ಸಮಾಜ ಬಹುಪಯೋಗಿ ಕಲ್ಯಾಣ ಸಂಘ ಖಂಡಿಸಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಸಂಘ ಮನವಿ ಸಲ್ಲಿಸಿದೆ.
‘ನಾವು ಬೆಸ್ತರ ಅಥವಾ ಬೋಯ ಜಾತಿಗೆ ಸೇರಿದವರಲ್ಲ, ನಿಜವಾದ ಭೋವಿ ಸಮುದಾಯ ನಮ್ಮದು. ದೇಶದಲ್ಲಿ ಜಾತಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ಭೋವಿ ಜಾತಿ ಅಸ್ತಿತ್ವದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಭೋವಿ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಯಿತು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
‘ಸ್ವಾತಂತ್ರ್ಯಪೂರ್ವದಲ್ಲಿ, ನಮ್ಮ ಪೂರ್ವಜರ ದಾಖಲೆಗಳು ಮತ್ತು ಪ್ರಸ್ತುತ ದಾಖಲೆಗಳು ಭೋವಿಯಾಗಿವೆ. ಸಂವಿಧಾನ ಮತ್ತು ಕಾನೂನಿನ ಪ್ರಕಾರ ಭೋವಿ ಜಾತಿಯು ಭೋವಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆಯುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಭೋವಿ ಜಾತಿ ಬೇರೆ ಮತ್ತು ವಡ್ಡರ ಜಾತಿ ಬೇರೆ ಎಂದು ಹೇಳುವ ಅನೇಕ ಸುತ್ತೋಲೆಗಳನ್ನು ಹೊರಡಿಸಿದೆ. ಅನವಶ್ಯವಾಗಿ ವಡ್ಡರ ಜನಾಂಗದವರು ಎರಡೆರಡು ಜಾತಿಯ ಹೆಸರನ್ನು ಹೇಳಿಕೊಳ್ಳುವುದು ಕೈಬಿಡಬೇಕು. ವಿನಾಕಾರಣ ನಮ್ಮ ಸಮಾಜದ ಬಗ್ಗೆ ತಪ್ಪು ಹೇಳಿಕೆ ಮತ್ತು ಅಪಪ್ರಚಾರ ನೀಡುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಜಾತಿ ಜಾತಿಗಳ ಮಧ್ಯ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಂತೆ ಆಗುತ್ತದೆ’ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಮನಪ್ಪ ಭೋವಿ, ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಭೋವಿ, ಭೋವಿ ಸಮಾಜ ಕಲಬುರಗಿ ಜಿಲ್ಲಾ ಅಧ್ಯಕ್ಷ ತುಕಾರಾಮ ಎಸ್.ನಾಯಿಂದ್ರಕರ್, ವಿಶ್ವೇಶ್ವರಯ್ಯ ಭೋವಿ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.