ADVERTISEMENT

ಪ್ರಜಾಪ್ರಭುತ್ವದ ಯಶಸ್ಸಿಗೆ ಮತಚಲಾಯಿಸಿ: ನೌಕರರ ಸಂಘದಿಂದ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2023, 15:59 IST
Last Updated 3 ಏಪ್ರಿಲ್ 2023, 15:59 IST
ಕಲಬುರಗಿಯಲ್ಲಿ ಸೋಮವಾರ ಮತದಾನ ಜಾಗೃತಿಗಾಗಿ ನಡೆದ ಬೈಕ್ ರ್‍ಯಾಲಿಯಲ್ಲಿ ಸಾಗಿದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು–ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ಮತದಾನ ಜಾಗೃತಿಗಾಗಿ ನಡೆದ ಬೈಕ್ ರ್‍ಯಾಲಿಯಲ್ಲಿ ಸಾಗಿದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು–ಪ್ರಜಾವಾಣಿ ಚಿತ್ರ   

ಕಲಬುರಗಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಮತದಾನ ಜಾಗೃತಿಗಾಗಿ ಸೋಮವಾರ ಬೈಕ್ ರ್‍ಯಾಲಿ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಗಂಜ್‌ ಪ್ರದೇಶದ ನಗರೇಶ್ವರ ಶಾಲೆವರೆಗೂ ಬೈಕ್ ರ್‍ಯಾಲಿ ಸಾಗಿ, ಜಗತ್ ವೃತ್ತದಲ್ಲಿ ಕೊನೆಗೊಂಡಿತು. ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಬದೋಲೆ, ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ರ್‍ಯಾಲಿಯಲ್ಲಿ ಬೈಕ್‌ ಓಡಿಸಿ ಗಮನ ಸೆಳೆದರು.

ಜಗತ್ ವೃತ್ತದಲ್ಲಿ ಯಶವಂತ ಗುರುಕರ್ ಸರ್ಕಾರಿ ನೌಕರರಿಗೆ ಮತದಾನದ ಪ್ರತಿಜ್ಞೆಯನ್ನು ಬೋಧಿಸಿದರು. ಕಂದಾಯ, ಕೃಷಿ, ಆರೋಗ್ಯ, ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡರು.

ADVERTISEMENT

ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ಚುನಾವಣೆ ಆಯೋಗದ ಗೀತೆಯಾದ ‘ಮಾಡಿ... ಮಾಡಿ... ಮತದಾನ’ ಹಾಡು ರ್‍ಯಾಲಿಯ ಉದ್ದಕ್ಕೂ ಮೊಳಗಿತು. ‘ಪ್ರಜಾಪ್ರಭುತ್ವದ ಯಶಸ್ವಿಗೊಳ್ಳಲು ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು’ ಎಂದು ಧ್ವನಿವರ್ಧಕ ಮೂಲಕ ಮನವಿ ಮಾಡಿಕೊಳ್ಳಲಾಯಿತು.

ನಗರದಲ್ಲಿ ಕನಿಷ್ಠ ಮತದಾನ: ಯಶವಂತ ಗುರುಕರ್ ಮಾತನಾಡಿ, ‘ಜಿಲ್ಲೆಯ ಮತ ಚಲಾವಣೆಯ ಪೈಕಿ ಕಲಬುರಗಿ ನಗರದಲ್ಲಿ ಶೇ 49ರಷ್ಟು ಮಾತ್ರ ಮತದಾನ ಆಗುತ್ತಿದೆ. ಇಬ್ಬರಲ್ಲಿ ಒಬ್ಬರು ಮಾತ್ರ ಮತ ಚಲಾಯಿಸುತ್ತಿದ್ದಾರೆ. ಸದೃಢ ಭಾರತ ನಿರ್ಮಾಣಕ್ಕೆ ಸಂವಿಧಾನಬದ್ಧ ಹಕ್ಕಾಗಿರುವ ಮತವನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಸಿ‌ಇಒ ಡಾ.ಗಿರೀಶ್ ಡಿ. ಬದೋಲೆ‌ ಮಾತನಾಡಿ, ‘ಈ ಬಾರಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಶೇ 75ಕ್ಕಿಂತ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸಲಾಗಿದೆ. ಮೇ 10ರಂದು ನಗರ ವಾಸಿಗಳು ತಪ್ಪದೆ ತಮ್ಮ ಮತ ಚಲಾಯಿಸಬೇಕು’ ಎಂದು ಕೋರಿದರು.

‘ಗ್ರಾಮೀಣ ಭಾಗದಲ್ಲಿ ಮತದಾನ ಜಾಗೃತಿ ನಡೆಸಲಾಗುವುದು. ಮುಂದಿನ ದಿನ ತಾಲ್ಲೂಕ ಹಂತದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.

ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಡಿಎಚ್ಒ ಡಾ.ರಾಜಶೇಖರ ಮಾಲಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ, ಆರ್‌ಸಿಎಚ್ಒ ಡಾ.ಪ್ರಭುಲಿಂಗ‌ ಮಾನಕರ್, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಸತೀಶ ಸಜ್ಜನ್,‌ ಬಾಬು ಮೌರ್ಯ, ನಾಗೇಂದ್ರಪ್ಪ ಅವರಾದಿ,‌ ರವಿ ಮಿರಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.