ಬಿಜೆಪಿ
ಜೇವರ್ಗಿ: ಪಕ್ಷದ ವಿಪ್ ಉಲ್ಲಂಘಿಸಿದ ಜೇವರ್ಗಿ ಪುರಸಭೆಯ 9 ಜನ ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಫೆ.12ರಂದು ಜೇವರ್ಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ ವಿಪ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಸದಸ್ಯರಾದ ಸಂಗಣಗೌಡ ರದ್ದೇವಾಡಗಿ, ಗುರುಶಾಂತಯ್ಯ ಹಿರೇಮಠ, ಕಸ್ತೂರುಬಾಯಿ ಸಾಹೇಬಗೌಡ ಕಲ್ಲಾ, ಮಲ್ಲಿಕಾರ್ಜುನ ಭಜಂತ್ರಿ, ಗಂಗೂಬಾಯಿ ಜಟ್ಟಿಂಗರಾಯ, ಸಿದ್ದರಾಮ ಯಳಸಂಗಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಶರಣಮ್ಮ ತಳವಾರ, ಚಂದ್ರಕಾಂತ ಮಹೇಂದ್ರಕರ್ ಅನರ್ಹಗೊಂಡವರು.
ಪುರಸಭೆ ಸದಸ್ಯರ ಅಧಿಕಾರ ಅವಧಿ ನವೆಂಬರ್ 6ಕ್ಕೆ ಕೊನೆಗೊಂಡಿದೆ. ಇದಕ್ಕೂ ಮುನ್ನವೇ, ಅಂದರೆ ನವೆಂಬರ್ 3ರಂದು ಜಿಲ್ಲಾಧಿಕಾರಿ ಸದಸ್ಯರನ್ನು ಅನರ್ಹಗೊಳಿಸಿದ್ದಾರೆ. 7ರಂದು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.
ಈ 9 ಜನ ಸದಸ್ಯರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್‌ಗೆ ಮತ ಚಲಾಯಿಸಿದ್ದರು ಎಂದು ಆರೋಪಿಸಿ ಬಿಜೆಪಿ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಸುದೀರ್ಘ ವಿಚಾರಣೆ ಬಳಿಕ ಈಗ ಆದೇಶ ಹೊರಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.