ADVERTISEMENT

ಕಲಬುರಗಿ: ಧರ್ಮಸ್ಥಳ ‌ಉಳಿವಿಗಾಗಿ ಬಿಜೆಪಿಯಿಂದ 'ಧರ್ಮಯುದ್ಧ' ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 8:08 IST
Last Updated 25 ಆಗಸ್ಟ್ 2025, 8:08 IST
<div class="paragraphs"><p>ಕಲಬುರಗಿಯಲ್ಲಿ ಬಿಜೆಪಿಯವರು ಪ್ರತಿಭಟನೆ ‌ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು</p></div>

ಕಲಬುರಗಿಯಲ್ಲಿ ಬಿಜೆಪಿಯವರು ಪ್ರತಿಭಟನೆ ‌ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು

   

ಕಲಬುರಗಿ: ಶ್ರೀಕ್ಷೇತ್ರ‌ ಧರ್ಮಸ್ಥಳದ‌ ಉಳಿವಿಗಾಗಿ ಬಿಜೆಪಿಯಿಂದ ನಗರದಲ್ಲಿ ಸೋಮವಾರ ಧರ್ಮಯುದ್ಧ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್‌ ವಲ್ಲಭಭಾಯಿ ‌ಪಟೇಲ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ‌ಕಾರ್ಯಕರ್ತರು ಸರ್ಕಾರದ ವಿರುದ್ಧ ‌ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ‌ಕಚೇರಿ ತನಕ ಪ್ರತಿಭಟನಾ ‌ಮೆರವಣಿಗೆ ನಡೆಸಿದರು.

ADVERTISEMENT

ಮೆರವಣಿಗೆಯಲ್ಲಿ 'ಧರ್ಮಕ್ಕೆ ಜಯವಾಗಲಿ, ದುಷ್ಟರ‌ ಸಂಹಾರವಾಗಲಿ', 'ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನ ಮಾಡುವವರ ಬಂಧನ ಯಾವಾಗ?', 'ಎಡಪಂಥಿಯರ ಷಡ್ಯಂತ್ರ ಬಯಲಿಗೆಳೆಯೋಣ ಧರ್ಮಸ್ಥಳ ರಕ್ಷಿಸೋಣ' ಎಂಬ ಭಿತ್ತಿ ಫಲಕ ಹಿಡಿದು, 'ಭಾರತ ಮಾತಾ ಕೀ ಜೈ', 'ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ', 'ಷಡ್ಯಂತ್ರ ರಚಿಸಿದ ಶಶಿಕಾಂತ್‌ ಸೆಂಥಿಲ್ ಧಿಕ್ಕಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ‌ ಸದಸ್ಯ ಅರುಣಕುಮಾರ ಪಾಟೀಲ, 'ಧರ್ಮದ‌ ರಕ್ಷಣೆಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳ ಅಸಂಖ್ಯ ಜನರ ಶ್ರದ್ಧಾ ಹಾಗೂ ಭಕ್ತಿಯ ಸ್ವರೂಪ. ಯಾವುದೇ ಧರ್ಮ, ಜಾತಿ ಭೇದವಿಲ್ಲದೇ ಮಾನವೀಯತೆ ಉಣಬಡಿಸುತ್ತಿರುವ ಧರ್ಮಸ್ಥಳ ಮಂಜುನಾಥ ಪುಣ್ಯಕ್ಷೇತ್ರವಾಗಿದೆ. ಇಂಥ ಕ್ಷೇತ್ರದ ವಿರುದ್ಧ ರಾಷ್ಟ್ರ ವಿರೋಧಿಗಳು, ಮಾನವತೆಯ ವಿರೋಧಿಗಳು ಕುತಂತ್ರದಿಂದ ಧರ್ಮಸ್ಥಳದ‌ ‌ಹುನ್ನಾರ ನಡೆಸಿದರು. ಸುಕ್ಷೇತ್ರಕ್ಕೆ ಧರ್ಮಸ್ಥಳ ‌ಮಂಜುನಾಥನಿಗೆ, ಪೀಠಾಧಿಪತಿ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ‌ತರುವ‌‌ ಕೆಲಸ ನಡೆಯಿತು‌. ಅದು‌ ಇದೀಗ ಜಗಜ್ಜಾಹೀರವಾಗಿದೆ. ಇದು ಮಾನವಕುಲಕ್ಕೆ ಕಳಂಕ ತರುವ ಕೆಲಸ' ಎಂದು ಟೀಕಿಸಿದರು.

'ಯಾರೋ ಒಬ್ಬರು 20 ವರ್ಷಗಳ ಬಳಿಕ ಬುರುಡೆ ‌ಹಿಡಿದು ಬಂದ ಅನಾಮಿಕ‌ ವ್ಯಕ್ತಿಯ ಮಾತು ನಂಬಿ ಧರ್ಮ ವಿರೋಧಿ, ಜನ ಜನವಿರೋಧಿ, ಸನಾತನ ವಿರೋಧಿ ಸರ್ಕಾರ ಎಸ್‌ಐಟಿ ರಚಿಸಿ ಆತ‌‌‌ ತೋರಿಸಿದಲ್ಲೆಲ್ಲ‌ ಅಗೆದರು. ಆದರೆ, ಅಲ್ಲಿ ಏನೂ ಸಿಗಲಿಲ್ಲ. ಇದರಿಂದ ಮಾಸ್ಕ್ ಧರಿಸಿದ್ದ ಅನಾಮಿಕ ವ್ಯಕ್ತಿಯ ಮುಖವಾಡ ಕಳಚಿದೆ. ಅವರ ಹಿಂದೆ ಯಾರೆಲ್ಲ ‌ಇದ್ದಾರೆ, ಅವರೆಲ್ಲರ‌ ವಿರುದ್ಧ‌ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು.‌ ಈ‌ ಸಮಾಜವನ್ನು, ಧರ್ಮವನ್ನು‌ ರಕ್ಷಣೆ‌ ಮಾಡಬೇಕು ಎಂದು ‌ಆಗ್ರಹಿಸಿದರು.

ಬಿಜೆಪಿ ಕಲಬುರಗಿ ನಗರ‌‌ ಜಿಲ್ಲಾಧ್ಯಕ್ಷ ಚಂದು ಪಾಟೀಲ‌‌ ಮಾತನಾಡಿದರು.

ಅವ್ವಣ್ಣ‌‌ ಮ್ಯಾಕೇರಿ ಸೇರಿದಂತೆ ಹತ್ತಾರು ಮುಖಂಡರು, ‌100ಕ್ಕೂ‌ ಅಧಿಕ‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ‌ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.