ADVERTISEMENT

ರಾವಣರ ಸಂಹಾರಕ್ಕೆ ಬಿಜೆಪಿಯಿಂದ ರಾಮರ ಸೃಷ್ಟಿ: ನಳಿನ್‌ಕುಮಾರ್ ಕಟೀಲ್‌

ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:25 IST
Last Updated 9 ಸೆಪ್ಟೆಂಬರ್ 2019, 14:25 IST
ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಪ್ರಮುಖರ ವಿಶೇಷ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸಂಸದ ಡಾ.ಉಮೇಶ ಜಾಧವ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ಅಮರನಾಥ ಪಾಟೀಲ ಇದ್ದರು
ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಪ್ರಮುಖರ ವಿಶೇಷ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸಂಸದ ಡಾ.ಉಮೇಶ ಜಾಧವ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ಅಮರನಾಥ ಪಾಟೀಲ ಇದ್ದರು   

ಕಲಬುರ್ಗಿ‌: ‘ಗಾಂಧೀಜಿಯವರ ರಾಮರಾಜ್ಯ ಕಲ್ಪನೆಯನ್ನು ಕಾಂಗ್ರೆಸ್‌ ಜಾರಿಗೆ ತರಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆ ಪಕ್ಷದ ದುರಾಡಳಿತದಿಂದಾಗಿ ಸಮಾಜದಲ್ಲಿ ರಾವಣರು ಸೃಷ್ಟಿಯಾಗಿದ್ದಾರೆ. ರಾವಣರ ಸಂಹಾರಕ್ಕೆ ಬಿಜೆಪಿ ಪ್ರತಿಯೊಂದು ಮನೆಯಲ್ಲಿ ರಾಮರನ್ನು ಸೃಷ್ಟಿಸಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಮನ ಬಗ್ಗೆ ಮಾತನಾಡುವವರನ್ನು ಕಾಂಗ್ರೆಸ್ಸಿಗರು ಕೋಮುವಾದಿ ಎಂದು ಕರೆಯುತ್ತಾರೆ. ಹಾಗಿದ್ದರೆ ರಾಮರಾಜ್ಯದ ಬಗ್ಗೆ ಹೇಳಿದ ಮಹಾತ್ಮ ಗಾಂಧೀಜಿ ಕೋಮುವಾದಿಯೇ’ ಎಂದು ಪ್ರಶ್ನಿಸಿದರು.

‘ರಾಮಾಯಣದಲ್ಲಿ ರಾವಣ ಒಬ್ಬನೇ ಇದ್ದ. ಆತನ ಸಂಹಾರಕ್ಕೆ ಒಬ್ಬ ರಾಮ ಸಾಕಾಗಿತ್ತು. ಈಗ ಪ್ರತಿಯೊಂದು ಮನೆಗೂ ಒಬ್ಬ ರಾಮರು ಉದಯಿಸಬೇಕಿದೆ. ವ್ಯಕ್ತಿಗಳನ್ನು ನಾವು ರಾಮರನ್ನಾಗಿ ತಯಾರು ಮಾಡುತ್ತೇವೆ’ ಎಂದರು.

ADVERTISEMENT

‘ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ನಾನು 2004ರಲ್ಲಿ ಪಕ್ಷದ ಕೆಲಸಗಳಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡೆ. ಆಗ ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿದ್ದರು. ಬಿಜೆಪಿಯಲ್ಲಿ ವೆಂಕಯ್ಯನಾಯ್ಡು ಅಧ್ಯಕ್ಷರಾಗಿದ್ದರು. ಆ ಬಳಿಕ ಬಿಜೆಪಿ ಅಧ್ಯಕ್ಷರಾಗಿ ರಾಜನಾಥ ಸಿಂಗ್‌, ನಿತಿನ್‌ ಗಡ್ಕರಿ, ಅಮಿತ್‌ ಶಾ ಅವರು ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಜೆ.ಪಿ. ನಡ್ಡಾ ಅವರು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಈಗಲೂ ಕಾಂಗ್ರೆಸ್‌ ಗಾಂಧಿ ಕುಟುಂಬದ ಕೈಯಲ್ಲೇ ಇದೆ. ಆದರೆ, ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾಗುತ್ತಲೇ ಇರುತ್ತಾರೆ. ನಿಜವಾದ ಪ್ರಜಾಪ್ರಭುತ್ವ ಬಿಜೆಪಿಯಲ್ಲೇ ಇದೆ’ ಎಂದು ಹೇಳಿದರು.

‘ಪಕ್ಷದ ಸದಸ್ಯತ್ವ 11 ಕೋಟಿ ಮೀರಿದ್ದು, ಬೂತ್‌ ಹಂತದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.