ADVERTISEMENT

ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಹೀಗಿದೆ ಗೆಲುವಿಗೆ ಬಿಜೆಪಿ ತಂತ್ರ

7 ಪರಿಷತ್ ಸದಸ್ಯರ ಸೇರ್ಪಡೆಗೆ ಜಿಲ್ಲಾಧಿಕಾರಿಗೆ ಪರಿಷತ್ ‌ಕಾರ್ಯದರ್ಶಿ ಪತ್ರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 8:38 IST
Last Updated 16 ನವೆಂಬರ್ 2021, 8:38 IST
   

ಕಲಬುರಗಿ: ವಿಧಾನಪರಿಷತ್ ನ ಏಳು ಜನ ಬಿಜೆಪಿ ಸದಸ್ಯರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಅವರ ಹೆಸರನ್ನು ಜಿಲ್ಲೆಯ ದಾಖಲೆಗಳಲ್ಲಿ ಸೇರ್ಪಡೆ ಮಾಡಬೇಕು ಎಂದು ವಿಧಾನಪರಿಷತ್ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಪತ್ರ ಬರೆದಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಇದೇ 20ರಂದು ನಡೆಯಲಿದ್ದು, ಜಿಲ್ಲೆಯ ಕಲಬುರಗಿ ದಕ್ಷಿಣ ಅಥವಾ ಉತ್ತರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೆ ಬಿಜೆಪಿ ಅನಾಯಾಸವಾಗಿ ಗೆಲುವು ಸಾಧಿಸಲಿದೆ. ಹೀಗಾಗಿ ಬಿಜೆಪಿ ಈ ತಂತ್ರವನ್ನು ರೂಪಿಸಿದೆ.

ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಏಳು ಜನ ಸದಸ್ಯರ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಉಪವಿಭಾಗಾಧಿಕಾರಿ ಇನ್ನೂ ಸ್ಪಷ್ಟಪಡಿಸಿಲ್ಲ.

ADVERTISEMENT

ಕೆಲವು ತಿಂಗಳ ಹಿಂದೆ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ಭಾರತಿ ಶೆಟ್ಟಿ, ಡಾ.ಸಾಬಣ್ಣ ತಳವಾರ, ರಘುನಾಥರಾವ್ ಮಲ್ಕಾಪುರೆ ಅವರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪರಿಷತ್ ಕಾರ್ಯದರ್ಶಿಗೆ ಪತ್ರ ನೀಡಿದ್ದರು.

ಅದರಂತೆ ಕಲಬುರಗಿ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯದರ್ಶಿ ಸೂಚಿಸಿದ್ದಾರೆ.

ಪರಿಷತ್ ಕಾರ್ಯದರ್ಶಿಯ ಪತ್ರ, ಮನೆ ಬಾಡಿಗೆ ಕರಾರು ಒಪ್ಪಂದ ಹಾಗೂ ಮತದಾರರ ಚೀಟಿಯುಳ್ಳ ದಾಖಲೆಗಳನ್ನು ಕಾಂಗ್ರೆಸ್ ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಈ ಕುರಿತು ಸೋಮವಾರ ‌ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ ಅವರು, ಚುನಾಯಿತ ಜನಪ್ರತಿನಿಧಿಗಳು ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನ ಮಾಡಲು ಹೆಸರು ನೋಂದಾಯಿಸಿಕೊಳ್ಳಬಹುದು. ಆದರೆ, ಒಂದು ನಿರ್ದಿಷ್ಟ ಸ್ಥಳದಲ್ಲಿ ಮತದಾನ ಮಾಡುವುದಾಗಿ ತಿಳಿಸಬೇಕು. ಆಗ ಉಳಿದ ಕಡೆ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದಿದ್ದರು.

ಏಳು ಜನ ಪರಿಷತ್ ಸದಸ್ಯರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರ ಮನೆಯ ವಿಳಾಸದಲ್ಲಿ ಬಾಡಿಗೆ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮನೆಗೆ ಭೇಟಿ ‌ನೀಡಿ ಪರಿಶೀಲಿಸಿದ್ದು, ಆ ಸಂದರ್ಭದಲ್ಲಿ ಅವರು ಹಾಜರಿರಲಿಲ್ಲ. ಆದರೆ ಪಕ್ಕದ ಮನೆಯಲ್ಲಿ ವಿಚಾರಿಸಿದಾಗ ಅವರು ಬಾಡಿಗೆ ಇರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಪರಿಷತ್ ಸದಸ್ಯರ ಈ ನಡೆಯನ್ನು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ.ಶರಣಪ್ರಕಾಶ ‌ಪಾಟೀಲ ಟೀಕಿಸಿದ್ದು, ಅಧಿಕಾರಕ್ಕೆ ಬರಲು ಅಗತ್ಯ ಬಲ ಇಲ್ಲದಿದ್ದರೂ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.