ADVERTISEMENT

ಕಲಬುರಗಿ | ‘ಕಾಂಗ್ರೆಸ್‌ನಿಂದ ಮಹಿಳಾ ವಿರೋಧಿ ಧೋರಣೆ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:13 IST
Last Updated 9 ನವೆಂಬರ್ 2023, 16:13 IST
ಶಶಿಕಲಾ ಟೆಂಗಳಿ
ಶಶಿಕಲಾ ಟೆಂಗಳಿ   

ಕಲಬುರಗಿ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ವಿರೋಧಿ ಆಡಳಿತ ನಡೆಸುತ್ತಿದೆ. ಪರೀಕ್ಷೆ ನಿಯಮದ ನೆಪದಲ್ಲಿ ಹಿಂದೂ ಧರ್ಮದಲ್ಲಿ ಪವಿತ್ರವಾದ ತಾಳಿ, ಕಾಲುಂಗುರ ತೆಗೆಸಿ  ತನ್ನ ಮಹಿಳಾ ವಿರೋಧಿ ದೋರಣೆಯನ್ನು ಮತ್ತೊಮ್ಮೆ ಸಾಬೀತುಗೊಳಿಸಿದೆ’‌ ಎಂದು ಮಹಿಳಾ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ ಆಕ್ರೋಶ ವ್ಯಕ್ತಪಡಿಸಿದರು.

‘ಬುರ್ಕಾ ಧರಿಸಿ ಹೋಗುವುದರಿಂದ ಅಕ್ರಮ ನಡೆಯುವುದಲ್ಲ ಎನ್ನುವುದಾದರೆ ತಾಳಿ, ಕಾಲುಂಗರದಿಂದ ಏಕೆ ಆಗುತ್ತದೆ. ಆಗುತ್ತದೆ ಎನ್ನುವುದಾದರೆ ಉಳಿದ ಅಕ್ರಮಗಳನ್ನು ಏಕೆ ನಿರ್ಲಕ್ಷ್ಯ ಮಾಡಿದಿರಿ‘ ಎಂದು ಗುರುವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನಮ್ಮ ಪ್ರದೇಶಗಳಲ್ಲಿ ಎಲ್ಲರೂ ಒಂದಾಗಿದ್ದೇವೆ, ಆದರೆ ಸರ್ಕಾರವೇ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ವೋಟ್‌ ಬ್ಯಾಂಕ್‌ ರಾಜಕಾರಣ ಬಿಟ್ಟು ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಿ. ತಾಳಿ ತೆಗೆಸಿದ ಘಟನೆ ನಿಮ್ಮ ಮನೆಯ ಮಹಿಳೆಯರಿಗೆ ನಡೆದಿದ್ದರೆ ನಿಮ್ಮ ಪ್ರತಿಕ್ರಿಯೆ ಏನಿರುತ್ತಿತ್ತು‘ ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ಕಿಡಿಕಾರಿದರು.

ADVERTISEMENT

‘ಒಬ್ಬ ಮಹಿಳಾ ಅಧಿಕಾರಿಯೇ ಇನ್ನೊಬ್ಬ ಮಹಿಳೆಯ ತಾಳಿ ತೆಗೆಸುತ್ತಾಳೆ ಎಂದರೆ ಅವರಿಗೆ ಯಾರಿಂದ, ಯಾವ ರೀತಿ ಸಂದೇಶ ಬಂದಿರಬಹುದು. ತಾಳಿ ತೆಗೆಸುವುದು ಸರ್ಕಾರ ನಿಯಮದಲ್ಲಿ ಇಲ್ಲದಿದ್ದರೂ ಅದನ್ನು ಮಾಡಿದ ಅಧಿಕಾರಿಗಳ ವಿಚಾರಣೆಯಾಗಬೇಕು. ಈ ರೀತಿ ಮಾಡಲು ಅವರಿಗೆ ಹೇಳಿದವರು ಯಾರು ಎನ್ನುವುದು ತಿಳಿಯಬೇಕು’ ಎಂದು ಆಗ್ರಹಿಸಿದ ಅವರು, ‘ಸರ್ಕಾರದ ಮಹಿಳಾ ವಿರೋಧಿ ನೀತಿಗಳ ವಿರುದ್ಧ ನಾವು ದೊಡ್ಡ ಮಟ್ಟದ ಹೋರಾಟಕ್ಕೂ ಸಿದ್ಧ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಪ್ರಗತಿ, ಶೋಭಾ, ಗೌರಿ, ಮೇಘನಾ, ಶಾಂತಾಬಾಯಿ ಸೇರಿದಂತೆ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.