ADVERTISEMENT

16ರಿಂದ ಜನಾಶೀರ್ವಾದ ಯಾತ್ರೆ: ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:44 IST
Last Updated 14 ಆಗಸ್ಟ್ 2021, 3:44 IST
ರಾಜಕುಮಾರ ಪಾಟೀಲ ತೆಲ್ಕೂರ
ರಾಜಕುಮಾರ ಪಾಟೀಲ ತೆಲ್ಕೂರ   

ಕಲಬುರ್ಗಿ: ‘ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವ ಸಂಪುಟದ ಸಚಿವರನ್ನು ಪರಿಚಯಿಸಲು ಕಾಂಗ್ರೆಸ್ ಅಡ್ಡಿ ಪಡಿಸಿದ್ದು ದುರದೃಷ್ಟಕರ. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಆಗಸ್ಟ್ 16ರಿಂದ ‘ಜನಾಶೀರ್ವಾದ ಯಾತ್ರೆ’ ನಡೆಸಲು ನಿರ್ಧರಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದ್ದಾರೆ.‌

‘ದೇಶದ ಉದ್ದಗಲಕ್ಕೆ ಜನಾಶೀರ್ವಾದ ಯಾತ್ರೆ ತೆರಳಲಿದೆ. ರಾಜ್ಯದಲ್ಲಿ ನಾಲ್ಕು ತಂಡಗಳು ಸಂಚರಿಸಲಿದ್ದು, ಸಚಿವರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರ ನೇತೃತ್ವದಲ್ಲಿ ಈ ತಂಡಗಳು ಪ್ರವಾಸ ಮಾಡಲಿವೆ. ಇದಕ್ಕಾಗಿ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಲಾಗಿದೆ’‌ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ 5 ದಿನಗಳ ಪ್ರವಾಸದಲ್ಲಿ 2,030 ಕಿ.ಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ ಯೋಜನೆಗಳು, ರೈತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು’ ಎಂದಿದ್ದಾರೆ.

ADVERTISEMENT

‘ಯಾತ್ರೆ ವೇಳೆ ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ಗೊಬ್ಬರ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಪಡೆಯಲಾಗುವುದು. ಸಾಹಿತಿಗಳು, ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುವುದು’ ಎಂದರು.

ಕಲ್ಯಾಣ ಕರ್ನಾಟಕ ಭಾಗದ ರೂಟ್‌ ಮ್ಯಾ‍ಪ್‌ ರ್ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.