ADVERTISEMENT

ಹಣಕಾಸಿನ ವ್ಯವಹಾರ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 15:43 IST
Last Updated 20 ಡಿಸೆಂಬರ್ 2025, 15:43 IST
   

ಕಲಬುರಗಿ: ಬಿಜೆಪಿಯ ದಕ್ಷಿಣ ಮಂಡಲದಲ್ಲಿ ಸಕ್ರಿಯವಾಗಿದ್ದ ಪಕ್ಷದ ಕಾರ್ಯಕರ್ತೆ ಬ್ರಹ್ಮಪುರ ಬಡಾವಣೆ ನಿವಾಸಿ ಜ್ಯೋತಿ ಪಾಟೀಲ (35) ಅವರು ಪಕ್ಷದ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮಲ್ಲಿನಾಥ ಬಿರಾದಾರ ಅವರ ನಂದಿಕೂರ ಗ್ರಾಮದ ಮನೆ ಎದುರು ಪೆಟ್ರೋಲ್ ಸುರಿದುಕೊಂಡು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮಲ್ಲಿನಾಥ ಬಿರಾದಾರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಮಹಿಳಾ ಘಟಕದಲ್ಲಿದ್ದ ಜ್ಯೋತಿ ಪಾಟೀಲ ಶುಕ್ರವಾರ ರಾತ್ರಿ ಏಕಾಏಕಿ ಮಲ್ಲಿನಾಥ ಮನೆಗೆ ತೆರಳಿದ್ದರು. ಈ ವೇಳೆ ಮಲ್ಲಿನಾಥ ಮನೆಯಲ್ಲಿರಲಿಲ್ಲ. ಅವರ ಹೆಂಡತಿ ಮತ್ತು ಮೂವರು ಮಕ್ಕಳು ಮನೆಯಲ್ಲಿದ್ದರು. ಮನೆಯ ಬಾಗಿಲು ತೆರೆಯುತ್ತಲೇ ಮಲ್ಲಿನಾಥ ಬಗ್ಗೆ ವಿಚಾರಿಸಿದ್ದಾರೆ. ಉತ್ತರ ನೀಡುವ ಮುನ್ನವೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದ ಈ ಘಟನೆಯಿಂದಾಗಿ ಮಲ್ಲಿನಾಥ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ADVERTISEMENT

ಶವದ ಪತ್ತೆ ಹಚ್ಚಲು ಪರದಾಟ: ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಯಾರು ಎಂಬುದು ನಂದಿಕೂರ ಗ್ರಾಮದ ಯಾರಿಗೂ ತಿಳಿದಿರಲಿಲ್ಲ. ಪೊಲೀಸರು ಬಂದಾಗಲೂ ತಕ್ಷಣಕ್ಕೆ ಮಾಹಿತಿ ಸಿಗಲಿಲ್ಲ. ದೂರದಲ್ಲಿ ಮಹಿಳೆ ನಿಲ್ಲಿಸಿದ್ದ ಬೈಕ್‌ನಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿ, ನಂತರ ಆಕೆಯ ಪತಿಯನ್ನು ಕರೆಸಿ ಶವ ಜ್ಯೋತಿ ಪಾಟೀಲರದ್ದೇ ಎಂದು ಖಚಿತ ಮಾಡಿಕೊಳ್ಳಲಾಯಿತು ಎಂದು ಪೊಲೀಸ್ ತಿಳಿಸಿವೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಫರಹತಾಬಾದ್ ಠಾಣೆಯ ಪಿಐ ಹುಸೇನ್ ಬಾಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಆತ್ಮಹತ್ಯೆ ಪ್ರಚೋದನೆ ದೂರು

‘ನನ್ನ ಹೆಂಡತಿಯದು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆಯಾಗಿದೆ. ಆರೋಪಿ ಮಲ್ಲಿನಾಥನೇ ಕೊಲೆ ಮಾಡಿದ್ದಾನೆ. ಹೀಗಾಗಿ ಆತನ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು’ ಎಂದು ಮೃತ ಜ್ಯೋತಿ ಪಾಟೀಲ ಪತಿ ಚಿದಾನಂದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಜ್ಯೋತಿ ಪಾಟೀಲ ಅವರಿಗೆ ನಾಲ್ವರು ಪುತ್ರಿಯರಿದ್ದಾರೆ.

ಜ್ಯೋತಿ ಪಾಟೀಲ ಅವರು ಕೆಲ ವ್ಯಕ್ತಿಗಳ ಜೊತೆಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡು ಜಗಳ ಮಾಡಿಕೊಂಡಿದ್ದರು. ಮಾಜಿ ಶಾಸಕರೊಬ್ಬರು ಜ್ಯೋತಿ ಅವರನ್ನು ಕರೆದು ಹೀಗೆ ಮಾಡದಂತೆ ಬುದ್ಧಿವಾದ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ಭಾಗವಹಿಸುತ್ತಿರಲಿಲ್ಲ ಎಂದು ಪಕ್ಷದ ನಾಯಕಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜ್ಯೋತಿ ಪಾಟೀಲ ಅವರು ವೈಯಕ್ತಿಕ ಕಾರಣಗಳಿಗಾಗಿ ಆರೋಪಿ ಮನೆ ಎದುರು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ
ಶರಣಪ್ಪ ಎಸ್.ಡಿ. ಕಲಬುರಗಿ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.