ADVERTISEMENT

ಅಪ್ರಸ್ತುತದತ್ತ ಮೀಸಲಾತಿ, ಸಾಮಾಜಿಕ ನ್ಯಾಯ; ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:47 IST
Last Updated 28 ಸೆಪ್ಟೆಂಬರ್ 2022, 5:47 IST
ಕಲಬುರಗಿ ನಗರದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ‘ಸಂವಿಧಾನ ಮತ್ತು ವಚನಗಳು’ ಪುಸ್ತಕದ ಕುರಿತು ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನದಾಸ್ ಮಾತನಾಡಿದರು. ಡಾ. ವಿಲಾಸವತಿ ಖೂಬಾ, ಅರವಿಂದ ಜತ್ತಿ ಇತರರು ಇದ್ದರು
ಕಲಬುರಗಿ ನಗರದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ‘ಸಂವಿಧಾನ ಮತ್ತು ವಚನಗಳು’ ಪುಸ್ತಕದ ಕುರಿತು ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನದಾಸ್ ಮಾತನಾಡಿದರು. ಡಾ. ವಿಲಾಸವತಿ ಖೂಬಾ, ಅರವಿಂದ ಜತ್ತಿ ಇತರರು ಇದ್ದರು   

ಕಲಬುರಗಿ: ‘ಶತಮಾನಗಳ ಕಾಲ ಪ್ರಾತಿನಿಧ್ಯ ಕಳೆದುಕೊಂಡಿದ್ದ ಜನರಿಗೆ ಸ್ವಾತಂತ್ರ್ಯದ ಬಳಿಕ ಆಸರೆಯಾಗಿದ್ದ ಸಾಂವಿಧಾನಿಕ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಇಂದಿನ ದಿನಗಳಲ್ಲಿ ಅಪ್ರಸ್ತುತ ಆಗುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.

ನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಗುಲಬರ್ಗಾ ವಕೀಲರ ಸಂಘ, ಎಸ್‌ಎಸ್‌ಎಲ್‌ ಕಾನೂನು ಮಹಾವಿದ್ಯಾಲಯ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಹಾಗೂ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ ಅವರೇ ಬರೆದ ‘ಸಂವಿಧಾನ ಮತ್ತು ವಚನಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಳೆದ ಏಳು ದಶಕಗಳಿಂದ ಮೀಸಲಾತಿ ಕೊಡುತ್ತಾ ಬಂದಿದ್ದರಿಂದ ಒಂದಷ್ಟು ಜನರಿಗೆ ಸಹಾಯವಾಗಿತ್ತು. 10–15 ವರ್ಷಗಳ ಬೆಳವಣಿಗೆ ಗಮನಿಸಿದರೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಅಪ್ರಸ್ತುತವಾಗುತ್ತಿವೆ. ಈ ಬಗ್ಗೆ ಚರ್ಚೆ ಮಾಡುವುದು ಅತ್ಯಗತ್ಯ’ ಎಂದು ಹೇಳಿದರು.

ADVERTISEMENT

‘ದೇಶದಾದ್ಯಂತ 60.40 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಾಗಿವೆ. ಶೇ 44ರಷ್ಟು ನೌಕರರು ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಹೊರಗುತ್ತಿಗೆ, ಅತಿಥಿ ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಗಳಿಂದ ಅರ್ಹರು ಮೀಸಲಾತಿ ಕಳೆದುಕೊಳ್ಳುತ್ತಿದ್ದಾರೆ’ ಎಂದರು.

‘1992ರಲ್ಲಿ ಆರಂಭವಾದ ಹೂಡಿಕೆ ಹಿಂತೆಗೆತದಿಂದ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಸರ್ಕಾರದ ಪಾಲಾಯಿತು. ನೂರಾರು ಉದ್ಯಮಗಳು ಖಾಸಗಿಯವರ ಪಾಲಾದವು. ಕೆಲವು ಉದ್ಯಮಗಳಲ್ಲಿ ನೇಮಕಾತಿಯೇ ಸ್ಥಗಿತ
ವಾದವು’ ಎಂದು ಬೇಸರಿಸಿದರು.

‘ಮುಂದಿನೆ ಕೆಲವೇ ವರ್ಷಗಳಲ್ಲಿ ರೊಬೊಟ್‌ಗಳು ಬರಲಿದ್ದು, ವೈದ್ಯರು ಶಸ್ತ್ರ ಚಿಕತ್ಸೆ ಮಾಡುವಂತಿಲ್ಲ. ವಕೀಲರು ಕೋರ್ಟ್‌ಗಳಲ್ಲಿ ವಾದ ಮಾಡುವುದು ತಪ್ಪಲಿದೆ. ನ್ಯಾಯಮೂರ್ತಿಗಳು ತೀರ್ಪುಕೊಡುವ ಸ್ಥಾನದಲ್ಲೂ ರೊಬೊಟ್‌ಗಳು ಬರಲಿವೆ’ ಎಂದು ಹೇಳಿದರು.

‘ಎಲ್ಲ ಭಾರತೀಯರಿಗೆ ಸಂವಿಧಾನವೇ ಮಹಾಗ್ರಂಥ. ಅದನ್ನು ಓದಿ ಅರ್ಥೈಸಿಕೊಳ್ಳಬೇಕು. ಸಂವಿಧಾನದಿಂದಲೇ ಭಾರತ ವಿಶ್ವದ ಅಗ್ರ 10 ಆರ್ಥಿಕ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಆದರೆ, ಅದು ಕಾನೂನಿನ ಚೌಕಟ್ಟಿನಲ್ಲಿ ಸಾಗುತ್ತದೆ. ಅದಕ್ಕೆ ವಚನಗಳ ಮೂಲಕ ನೈತಿಕ ಚೌಕಟ್ಟಿನ ಸ್ಪರ್ಶ ನೀಡಿದರೆ ಇಂದಿನ ಸಮಸ್ಯೆ ಹಾಗೂ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ವಿಶ್ಲೇಷಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ಬಸವಣ್ಣ ಜಗತ್ತಿನ ಪ್ರಜಾಪ್ರಭುತ್ವದ ನಾಯಕ. ಅವರನ್ನು ಒಂದು ಜಾತಿ, ಧರ್ಮ, ಪುರಾಣಕ್ಕೆ ಸೀಮಿತಗೊಳಿಸದೇ ಅವರನ್ನು ಮಾನವೀಯ ವ್ಯಕ್ತಿಯಾಗಿ ಕಾಣಬೇಕಿದೆ’ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ನಿವೃತ್ತ ನ್ಯಾಯಮೂರ್ತಿ ಸಿ.ಆರ್‌. ಬೆನಕನಳ್ಳಿ, ರಾಜ್ಯ ಅಡ್ವೊಕೇಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್‌ ಕಪನೂರು ಇದ್ದರು.

ಭಯೋತ್ಪಾದನೆ, ಕೋಮುವಾದ, ಮೂಲಭೂತವಾದದ ಜತೆಗೆ ಸಾಂಸ್ಕೃತಿಕ ದಿವಾಳಿತನ ದೇಶಕ್ಕೆ ಬಹುದೊಡ್ಡ ಸವಾಲಾಗಿದೆ. ಇಂದಿನ ಯುವಕರು ಸಾಂಸ್ಕೃತಿಕ ಮೌಲ್ಯಗಳನ್ನು ಕಟ್ಟಿಕೊಳ್ಳದೆ ಇದ್ದರೆ ದೇಶಕ್ಕೆ ಉಳಿಗಾಲವಿಲ್ಲ
ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.