ಯಡ್ರಾಮಿ: ತಾಲ್ಲೂಕಿನ ಕಣಮೇಶ್ವರ ಗ್ರಾಮದ ಜಮೀನಿನಲ್ಲಿ ಶುಕ್ರವಾರ ವಿದ್ಯುತ್ ತಂತಿ ತಗಲಿ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ.
ಕಣಮೇಶ್ವರ ಗ್ರಾಮದ ಆಕಾಶ ಬಸವರಾಜ ಸುಂಬಡ (19) ಸ್ಥಳದಲ್ಲೇ ಮೃತಪಟ್ಟರೆ ಇವರ ಅಣ್ಣ ಪ್ರಕಾಶ ಬಸವರಾಜ ಸುಂಬಡ (21) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ.
‘ಗ್ರಾಮದ ಹೊರವಲಯದಲ್ಲಿ ಗುತ್ತಿಗೆದಾರರೊಬ್ಬರು ಚೆಕ್‌ಡ್ಯಾಮ್ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಈ ಇಬ್ಬರೂ ಸಹೋದರರು ಗುತ್ತಿಗೆದಾರರ ಬಳಿ ಕೆಲಸಕ್ಕೆ ಹೋಗಿದ್ದರು. ಚೆಕ್‌ಡ್ಯಾಮ್‌ಗೆ ಬೇಕಾದ ಕಬ್ಬಿಣದ ರಾಡ್‌ಗಳನ್ನು ಎಳೆದುಕೊಂಡು ಹೊಲ ದಾಟುತ್ತಿದ್ದರು.ಅಲ್ಲಿನ ಬೋರ್‌ವೆಲ್‌ಗೆ ಅಳವಡಿಸಿದ್ದ ವಿದ್ಯುತ್ ತಂತಿ ಹರಿದುಬಿದ್ದು ನಿಂತಿದ್ದ ನೀರಿನಲ್ಲಿ ವಿದ್ಯುತ್ ಹರಿಯುತ್ತಿತ್ತು. ಯುವಕರು ಕಬ್ಬಿಣದ ರಾಡ್‌ಗಳನ್ನು ಎಳೆದುಕೊಂಡು ಹೋಗುವಾಗ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದ ಕೆಲಸಗಾರರು ಬಂದು ನೋಡುವಷ್ಟರಲ್ಲಿ ಆಕಾಶ ಪ್ರಾಣ ಪಕ್ಷ ಹಾರಿಹೋಗಿತ್ತು. ಪ್ರಕಾಶ ತುಸು ಸ್ಪಂದಿಸುತ್ತಿದ್ದ. ತಕ್ಷಣ ಅವರನ್ನು ವಾಹನದಲ್ಲಿ ಹಾಕಿಕೊಂಡು ಇಂಡಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗೆ ಅವರ ಜೀವ ಹೋಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ನಂತರ ಇಬ್ಬರ ಕಳೇಬರವನ್ನೂ ಘಟನೆ ನಡೆದ ಸ್ಥಳದಲ್ಲೇ ತಂದು ಇಡಲಾಯಿತು.
ಇವರೊಂದಿಗೇ ಕಬ್ಬಿಣದ ರಾಡ್ ಎಳೆದುಕೊಂಡು ಹೊರಟಿದ್ದ ರವಿ ಗುರಪ್ಪ (22) ಎಂಬ ಇನ್ನೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಡ್ರಾಮಿ ತಹಶೀಲ್ದಾರ್ ಶಾಂತಗೌಡ ಬಿರಾದಾರ, ಎಎಸ್‌ಐ ಗುರಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದುಡಿಯುವ ಮಕ್ಕಳೇ ಹೆಣವಾದರು:
ದುಡಿಮೆ ಮಾಡಿ ತಂದೆ– ತಾಯಿ ಕಷ್ಟ ನಿವಾರಣೆಗೆ ನೆರವಾಗುತ್ತಿದ್ದ ಹರೆಯದ ಇಬ್ಬರು ಮಕ್ಕಳು ಈಗ ಹೆಣವಾಗಿದ್ದಾರೆ. ಬೆಂಗಳೂರಿಗೆ ವಲಸೆ ಹೋಗಿದ್ದ ಈ ಇಬ್ಬರೂ ಹುಡುಗರು ಕಳೆದ ತಿಂಗಳು ಲಾಕ್‌ಡೌನ್ ಕಾರಣ ಊರಿಗೆ ಮರಳಿದ್ದರು. ಸಣ್ಣ ಗುಡಿಸಲು ಹಾಕಿಕೊಂಡು ಬದುಕುತ್ತಿರುವ ಈ ಬಡ ಕುಟುಂಬಕ್ಕೆ ಈಗ ದಿಗಿಲು ಬಡಿದಂತಾಗಿದೆ.
ಮೃತಪಟ್ಟ ಯುವಕರ ತಂದೆಬಸವರಾಜ ಅವರ ಮೂಲ ಊರು ಯಡ್ರಾಮಿ ತಾಲ್ಲೂಕಿನ ಹರನಾಳ. ಮದುವೆಯಾದ ನಂತರ ಪತ್ನಿಯ ಊರಾದ ಸುಂಬಡ ಗ್ರಾಮದಲ್ಲೇ ಅವರು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸಿದ್ದರು. ಈ ದಂಪತಿಗೆ ಐವರು ಮಕ್ಕಳಿದ್ದಾರೆ. ಈಗ ಮೃತಪಟ್ಟ ಪ್ರಕಾಶ (21), ಆಕಾಶ (19) ಸೇರಿದಂತೆ ವೀರೇಶ (9), ಸಿದ್ಧಾರ್ಥ (6) ಹಾಗೂ ಸಾಕ್ಷಿ (3).
ನಾಲ್ವರು ಪುತ್ರರ ಪೈಕಿ ಪ್ರಕಾಶ ಹಾಗೂ ಆಕಾಶ ಇಬ್ಬರೂ ಬೆಳೆದುನಿಂತ ಮೇಲೆ ತಂದೆ– ತಾಯಿ ಜತೆಗೆ ಕೆಲಸ ಮಾಡಲು ಆರಂಭಿಸಿದ್ದರು. ಕೆಲ ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದರು. ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದ್ದು, ಮತ್ತು ಲಾಕ್‌ಡೌನ್ ಕಾರಣ ಕಳೆದ ತಿಂಗಳಷ್ಟೇ ಉರಿಗೆ ಮರಳಿದ್ದರು.
ಹಳ್ಳಿಗಲ್ಲಿ ಚೆಕ್‌ಡ್ಯಾಮ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದನ್ನು ಕಂಡು ಕೆಲಸಕ್ಕೆ ಸೇರಿಕೊಂಡಿದ್ದರು. ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋದ ಈ ಹರೆಯದ ಜೀವಗಳು ಈಗ ಮರಳಿ ಬಾರದ ಲೋಕಕ್ಕೆ ಹೋಗಿವೆ.
ವಯಸ್ಸಾದ ತಂದೆ– ತಾಯಿ, ಮೂವರು ಪುಟ್ಟ ಮಕ್ಕಳಿದ್ದ ಮನೆಯನ್ನು ಈ ಇಬ್ಬರು ಸಹೋದರರೇ ಸಲಹುತ್ತಿದ್ದರು. ಎಸ್ಸೆಸ್ಸೆಲ್ಸಿ ಮುಗಿದ ನಂತರ ದುಡಿಮೆ ಅನಿವಾರ್ಯವಾಗಿ ಅವರು ಓದು ನಿಲ್ಲಿಸಿದ್ದರು. ಸದ್ಯ ತಮ್ಮಂದಿರನ್ನು ಓದಿಸುತ್ತಿದ್ದರು.
ಗಟ್ಟಿಮುಟ್ಟಾಗಿದ್ದ ಮಕ್ಕಳಿಬ್ಬರು ಕಣ್ಣಿನ ಮುಂದೆ ಶವವಾಗಿ ಬಿದ್ದಿದ್ದನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.