ADVERTISEMENT

ವಾಡಿ | ಬಸ್‌ ಸಮಸ್ಯೆ: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:40 IST
Last Updated 28 ನವೆಂಬರ್ 2023, 16:40 IST
ವಾಡಿ ಪಟ್ಟಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ವಿದ್ಯಾರ್ಥಿಗಳು.
ವಾಡಿ ಪಟ್ಟಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ವಿದ್ಯಾರ್ಥಿಗಳು.   

ವಾಡಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆ-ಕಾಲೇಜುಗಳಿಗೆ ತೆರಳಲು ಪರದಾಡಬೇಕಾದ ಸ್ಥಿತಿ ಉಂಟಾಗಿದೆ.

ನಾಲವಾರ, ಲಾಡ್ಲಾಪುರ, ಹಲಕರ್ಟಿ, ರಾವೂರು ಸೇರಿ ಇನ್ನಿತರ ಗ್ರಾಮಗಳಿಂದ ಪಟ್ಟಣಕ್ಕೆ ಅಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳು ಬಸ್‌ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಅಪರೂಪಕ್ಕೆ ಬಸ್‌ಗಳು ಬಂದರೂ ‘ಪಟ್ಟಣದ ಒಳಗೆ ಹೋಗುವುದಿಲ್ಲ’ ಎಂದು ಹೇಳಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ನಿಲ್ಲುವ ಕೆಲವು ಬಸ್‌ಗಳಲ್ಲಿ ಗುದ್ದಾಡಿ, ಮೂಕಾಡಿ ಹತ್ತಿದರೂ  ಕೂರಲು ಸ್ಥಳ ಇರುವುದಿಲ್ಲ. ಕೆಲ ವಿದ್ಯಾರ್ಥಿನಿಯರಿಗೆ ಬಸ್‌ನಲ್ಲಿ ಸ್ಥಳ ಸಿಗದೇ ಬಸ್ ನಿಲ್ದಾಣದಲ್ಲೇ ಉಳಿಯುವ ಘಟನೆಗಳು ಜರುಗುತ್ತಿವೆ.

ADVERTISEMENT

ಲಾಡ್ಲಾಪುರ ಬೈಪಾಸ್ ಮೂಲಕ ಬಸ್‌ಗಳು ತೆರಳುತ್ತಿದ್ದು ಲಾಡ್ಲಾಪುರ, ಹಣ್ಣಿಕೇರಾ, ಕೊಂಚೂರು, ಅಳ್ಳೊಳ್ಳಿಯ ಹಲವು ವಿದ್ಯಾರ್ಥಿಗಳು ಬಸ್‌ಗೆ ಕಾದು ಮನೆಗೆ ಮರಳುವ ಘಟನೆಗಳು ನಿತ್ಯ ಜರುಗುತ್ತಿವೆ. ಕಲಬುರಗಿ, ಯಾದಗಿರಿಗೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಹ ಬೆಳಿಗ್ಗೆ ಬಸ್‌ ಬಾರದೆ ತೊಂದರೆ ಎದುರಿಸುತ್ತಿದ್ದಾರೆ.

ಬೆಳಿಗ್ಗೆ ಹಾಗೂ ಸಂಜೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ, ಜನರಿಗೆ  ಅನುಕೂಲವಾಗುತ್ತದೆ ‌ಎನ್ನುತ್ತಾರೆ ಪೋಷಕ ರಾಚಣ್ಣ ಬೇಕನಾಳ.

‘ಬೆಳಗಿನ ಹೊತ್ತಿನಲ್ಲಿ ಮತ್ತು ಸಂಜೆ ಬಸ್‌ಗಳ ತೀವ್ರ ಕೊರತೆಯಿದ್ದು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳಾದ ಸಪ್ನಾ ನಾಗರಾಜ್, ಭಾವನಾ, ಶ್ವೇತಾ, ಶ್ರೀಧರ ಕುಂಬಾರ, ಮಹಾಲಕ್ಷ್ಮಿ, ರೋಹಿತಕುಮಾರ, ಮಣಿಕಂಠ ಹಲಕರ್ಟಿ ಅಳಲು ತೋಡಿಕೊಂಡರು.

ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಓಡಾಟ ಸಹಜವಾಗಿ ಹೆಚ್ಚಿರುತ್ತದೆ ಎನ್ನುವ ಪ್ರಜ್ಞೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸುವ ಪೋಷಕರು ಬಸ್‌ಗಳ ಸಮಸ್ಯೆಯಿಂದ ಒಮ್ಮೊಮ್ಮೆ ನಮ್ಮ ಮಕ್ಕಳು ರಾತ್ರಿ 8 ಗಂಟೆಯದರೂ ಮನೆಗೆ ಮರಳುವುದಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಕಾಳಜಿ ವಹಿಸಿ ಕ್ಷೇತ್ರದಲ್ಲಿ ಬಸ್‌ಗಳ ಓಡಾಟಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಾಡಿ ಪಟ್ಟಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ವಿದ್ಯಾರ್ಥಿಗಳು.
ನಿತ್ಯ ನಾಲವರದಿಂದ ವಾಡಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ವಾಡಿ ಪಟ್ಟಣದೊಳಕ್ಕೆ ಬಸ್‌ಗಳು ಬಾರದೇ ಇರುವುದು ಸಮಸ್ಯೆಗೆ ಮೂಲ ಕಾರಣ
ಕೃಷ್ಣ ಚವ್ಹಾಣ ವಿದ್ಯಾರ್ಥಿ
ಲಾಡ್ಲಾಪುರ ಗ್ರಾಮದೊಳಗೆ ಬಸ್ ಬಾರದೇ ಬೈಪಾಸ್ ಮಾರ್ಗವಾಗಿ ಹೋಗುತ್ತಿದ್ದು ನಿತ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ಎಲ್ಲಾ ಬಸ್‌ಗಳು ಗ್ರಾಮದೊಳಗೆ ಬರುವಂತೆ ಕ್ರಮ ತೆಗೆದುಕೊಳ್ಳಬೇಕು
ಸಪ್ನಾ ನಾಗರಾಜ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.