
ಜೇವರ್ಗಿ: ತಾಲ್ಲೂಕಿನ ಚನ್ನೂರ ಗ್ರಾಮದ ಬಳಿಯ ಆದರ್ಶ ವಿದ್ಯಾಲಯದ ಮಕ್ಕಳು ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ವಾರದಲ್ಲಿ ಎರಡು–ಮೂರು ದಿನ ಮೊದಲ ತರಗತಿ ತಪ್ಪಿಸಿಕೊಳ್ಳುತ್ತಿದ್ದಾರೆ. ಬೆಳಗಿನ ವೇಳೆಯಲ್ಲಿ ಶಾಲಾ–ಕಾಲೇಜುಗಳಿಗೆ ಬರಲು ಅನುಕೂಲವಾಗುವಂತೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರ್ಶ ಶಾಲೆಯಲ್ಲಿ 300 ಮಕ್ಕಳು, 15ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ನಿತ್ಯ ಶಾಲೆಗೆ ಹೋಗಲು, ಮನೆಗೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಸಮಯಕ್ಕೆ ಹಾಗೂ ಶಾಲೆ ಮುಗಿದರೂ ಬಸ್‌ಗಳು ಬಾರದ ಪರಿಣಾಮ ಸುಮಾರು 1 ಗಂಟೆಗೂ ಅಧಿಕ ಸಮಯ ಮಕ್ಕಳು ಶಾಲೆಯಲ್ಲೇ ಉಳಿಯುವಂತಾಗಿದೆ. ಹೀಗಾಗಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಕ್ಕಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.
ಗಂಟೆಗಳ ಕಾಲ ಕಾದು ಸಿಗುವ ಯಾವುದೊ ಒಂದು ಬಸ್‌ನಲ್ಲಿ ನಿಲ್ಲಲು ಜಾಗವಿರದೆ ಫುಟ್ ಬೋರ್ಡ್ ಮೇಲೆ ಜೋತು ಬಿದ್ದು ಪ್ರಯಾಣಿಸುವ ದೃಶ್ಯ ಆಗಾಗ ಕಂಡುಬರುತ್ತಿದೆ. ಮುಂಜಾನೆ ಸಮಯಕ್ಕೆ ಸರಿಯಾಗಿ ಬಸ್ ಬರುವುದೇ ವಿರಳವಾಗುತ್ತಿದೆ. 7ರಿಂದ 10 ಗಂಟೆಯಾದರೂ ಬಸ್ ಬರುವುದಿಲ್ಲ. ಅಧಿಕಾರಿಗಳನ್ನು ಕೇಳಿದರೆ, ‘ಡಿಪೊದಲ್ಲಿ ಬಸ್ ಇಲ್ಲ’, ‘ಬಸ್ ಕ್ಯಾನ್ಸಲ್ ಆಗಿದೆ’, ‘ಡ್ರೈವರ್ ಕಂಡಕ್ಟರ್ ಇದಾರೆ, ಬಸ್ ಇಲ್ಲ’, ‘ಡಿಪೊಗೆ ತಿಳಿಸಿದ್ದೇವೆ ಬರುತ್ತದೆ, ವೇಟ್ ಮಾಡಿ’ ಎಂದು ಸಬೂಬು ಹೇಳುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು.
ಕೆಲವು ದಿನಗಳಿಂದ ಮಧ್ಯಂತರ ಪರೀಕ್ಷೆಗಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿವೆ. ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಆತಂಕದಲ್ಲಿ ಹೋಗಿ ಪರೀಕ್ಷೆ ಬರಿಯಬೇಕು. ಬಹಳ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.
ನರಿಬೋಳ, ರಾಜವಾಳ ಗ್ರಾಮಕ್ಕೆ ತೆರಳುವ ಬಸ್ ಶಾಲಾ ಸಮಯ ಹೊರತುಪಡಿಸಿ ಸಂಚಾರ ಮಾಡುತ್ತಿರುವುದರಿಂದ ಹಾಗೂ ಈ ಶಾಲೆಯ ಮಕ್ಕಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡದ ಕಾರಣ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳುತ್ತಿಲ್ಲ. ಬರುವ ಕೆಲ ಬಸ್‌ಗಳನ್ನೂ ನಿಲುಗಡೆ ಮಾಡುವುದಿಲ್ಲ. ಕೆಲವರು ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕೆಕೆಆರ್‌ಟಿಸಿ ಬಸ್ ಸಿಗದಿದ್ದರೆ, ಖಾಸಗಿ ವಾಹನಗಳಿಗೆ ದುಬಾರಿ ಹಣ ತೆರಲಾಗದೆ ಅನೇಕ ವಿದ್ಯಾರ್ಥಿಗಳು ಮನೆಗೆ ವಾಪಸ್ ಹೋಗುವುದು ಸಾಮಾನ್ಯವಾಗಿದೆ.
ಕೆಲವು ಸಲ ತೊಂದರೆಯಾಗಿರಬಹುದು. ಇನ್ಮುಂದೆ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಲಾಗುವುದುಕೃಷ್ಣಾ ಪವಾರ ಬಸ್ ಘಟಕ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.