ADVERTISEMENT

ವಾಡಿ | ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 6:36 IST
Last Updated 17 ಆಗಸ್ಟ್ 2023, 6:36 IST
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಗುರುವಾರ  ಪ್ರತಿಭಟನೆ ಮಾಡಿದ‌ ವಿದ್ಯಾರ್ಥಿಗಳು
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಗುರುವಾರ ಪ್ರತಿಭಟನೆ ಮಾಡಿದ‌ ವಿದ್ಯಾರ್ಥಿಗಳು   

ವಾಡಿ(ಕಲಬುರಗಿ): ಸಮೀಪದ ‌ಹಲಕರ್ಟಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಕ್ಸ್‌ಪ್ರೆಸ್‌ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

ಸುಮಾರು ಒಂದು ಗಂಟೆ ಕಾಲ ಕಲಬುರಗಿ- ಯಾದಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ- 150ರ ಮೇಲೆ ಪ್ರತಿಭಟನೆ ನಡೆಸಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆದರು. ಸಾರಿಗೆ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ಶಾಲಾ -ಕಾಲೇಜುಗಳಿಗೆ ಹೋಗಲು ಬೆಳಿಗ್ಗೆ 7ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತೇವೆ. ಬೆಳಿಗ್ಗೆ ಸಮಯದಲ್ಲಿ ಬೆರಳಣಿಕೆಯಷ್ಟು ಬಸ್‌ಗಳು ಮಾತ್ರ ಓಡಾಡುತ್ತಿದ್ದು, ಅವು ಹಲಕರ್ಟಿ ಗ್ರಾಮದಲ್ಲಿ ನಿಲ್ಲುತ್ತಿಲ್ಲ. ವಿದ್ಯಾರ್ಥಿಗಳು ಕಾಣುತ್ತಿದ್ದಂತೆ ಚಾಲಕರು, ಬಸ್ ನಿಲ್ಲಿಸದೇ ಮತ್ತಷ್ಟು ವೇಗವಾಗಿ ಹೋಗುತ್ತಾರೆ. ಇದರಿಂದ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಶಾಲೆಗೆ ನಿತ್ಯ ತಡವಾಗಿ ಹೋಗಿ ಅವಮಾನ ಅನುಭವಿಸುತ್ತಿದ್ದೇವೆ' ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ADVERTISEMENT

'ಗ್ರಾಮದಿಂದ ವಾಡಿ ಪಟ್ಟಣ, ರಾವೂರು, ಶಹಾಬಾದ್, ಯಾದಗಿರಿ, ಕಲಬುರಗಿ, ಚಿತ್ತಾಪುರ ಸೇರಿ ಹಲವೆಡೆ ನೂರಾರು ಜನ ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ, ಚಾಲಕರು, ನಿರ್ವಾಹಕರು ಬಸ್ ಖಾಲಿ ಇದ್ದರೂ ನಿಲ್ಲಿಸದೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ವಿಷಯದಲ್ಲಿ ಸಾರಿಗೆ ಇಲಾಖೆಯು ಬೇಜವಾಬ್ದಾರಿ ತೋರುತ್ತಿದೆ' ಎಂದು ಗ್ರಾಮಸ್ಥರು ಹೇಳಿದರು.

ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ದೂರಿದರು.

'ಸಮರ್ಪಕ ಬಸ್ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿ ಹಲವು ಬಾರಿ ರಸ್ತೆ ತಡೆ, ಪ್ರತಿಭಟನೆ ಮಾಡಿದ್ದರೂ ಸಾರಿಗೆ ಇಲಾಖೆ ಗಮನ ಹರಿಸುತ್ತಿಲ್ಲ. ಶಾಲಾ ತರಗತಿಯಲ್ಲಿ ಇರಬೇಕಾದ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆ ಮೇಲೆ ಕಾಯುವುದು ಸರಿಯಲ್ಲ. ಪ್ರತಿಸಲ ಹೋರಾಟ ಮಾಡಿದಾಗ ಒಂದು ವಾರದ ಮಟ್ಟಿಗೆ ವ್ಯವಸ್ಥೆ ಮಾಡಿ ಮತ್ತದೇ ನಿರ್ಲಕ್ಷ್ಯ ಮುಂದುವರೆಸುತ್ತಾರೆ' ಎಂದು ಎಐಕೆಎಂಎಸ್ ರೈತ ಸಂಘಟನೆ ಮುಖಂಡ ಶಿವಕುಮಾರ ಆಂದೋಲ ಹಾಗೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಸದಸ್ಯ ಸಿದ್ದಾರ್ಥ ಪರತುರಕರ್ ಆರೋಪಿಸಿದರು.

ಗ್ರಾ.ಪಂ ಸದಸ್ಯ ರಾಘವೇಂದ್ರ ಅಲ್ಲಿಪುರ, ಗ್ರಾಮಸ್ಥರಾದ ಶೇಖಪ್ಪ ತಳ್ಳಳ್ಳಿ, ನೀಲಕಂಠಪ್ಪ ಸಂಗಶೆಟ್ಟಿ, ಹೀರಾ ಜಾಧವ, ಮುನಿಯಪ್ಪ ಕೊಟಗಿ ಇದ್ದರು.

ಸ್ಥಳಕ್ಕೆ ವಾಡಿ ಪಿಎಸ್‌ಐ ತಿರುಮಲೇಶ ಕುಂಬಾರ ಅವರು ಬಂದು ವಿದ್ಯಾರ್ಥಿಗಳು, ಗ್ರಾಮಸ್ಥರ ಮನವೊಲಿಸಿದರು. ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.