ADVERTISEMENT

ಕಲಬುರಗಿ, ಬೀದರ್‌ ಜಿಲ್ಲೆ ಕುಡಿಯುವ ನೀರಿಗೆ ₹ 7,200 ಕೋಟಿ

ಹಂಪಿ, ಅಂಜನಾದ್ರಿ, ಮಳಖೇಡ ಅಭಿವೃದ್ಧಿಗೆ ಅನುದಾನ; 45 ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 8:04 IST
Last Updated 18 ಸೆಪ್ಟೆಂಬರ್ 2024, 8:04 IST
<div class="paragraphs"><p>ಕಲಬುರಗಿಯಲ್ಲಿ ಮಂಗಳವಾರ ಸಚಿವ ಸಂಪುಟ ಸಭೆಗೂ ಮುನ್ನ ಮಿನಿವಿಧಾನಸೌಧ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರ್ವಜನಿಕರತ್ತ ಕೈಬೀಸಿದರು. </p></div>

ಕಲಬುರಗಿಯಲ್ಲಿ ಮಂಗಳವಾರ ಸಚಿವ ಸಂಪುಟ ಸಭೆಗೂ ಮುನ್ನ ಮಿನಿವಿಧಾನಸೌಧ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರ್ವಜನಿಕರತ್ತ ಕೈಬೀಸಿದರು.

   

ಕಲಬುರಗಿ: ಶುದ್ಧ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿರುವ ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಎಲ್ಲ ಜನವಸತಿ ಪ್ರದೇಶಗಳ ಕುಡಿಯುವ ನೀರಿಗಾಗಿ ₹ 7,200 (ಕೇಂದ್ರದಿಂದ ₹ 3,600 ಕೋಟಿ, ರಾಜ್ಯದಿಂದ ₹ 3,600) ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ, ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿ, ಸಿಬ್ಬಂದಿಗಾಗಿ ಸಮಗ್ರ ಟೌನ್‌ಶಿಪ್‌ ಯೋಜನೆಯ ಅಂದಾಜು ವೆಚ್ಚ ₹ 998.50 ಕೋಟಿಗೆ ಆಡಳಿತಾತ್ಮಕ ಅನುಮೋದನೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ 45 ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ...

ಇವು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳು.

ADVERTISEMENT

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳನ್ನು ಚರ್ಚೆ ಮಾಡಿ 12,692 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆ ಪೈಕಿ ₹ 11,770 ಕೋಟಿ ವೆಚ್ಚದ 46 ವಿಷಯಗಳು ಕಲ್ಯಾಣ ಕರ್ನಾಟಕಕ್ಕೇ ಸಂಬಂಧಿಸಿವೆ. ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪ್ರತಿ ವರ್ಷ ₹ 5 ಸಾವಿರ ಕೋಟಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನೀಡಲಾಗುತ್ತಿದೆ’ ಎಂದರು.

ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು ಇಂತಿವೆ:

31 ಸಮುದಾಯ ಆರೋಗ್ಯ ಕೇಂದ್ರಗಳ ಪ್ರಾರಂಭ, 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ 2 ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದಕ್ಕೆ ₹ 890 ಕೋಟಿ ವೆಚ್ಚ ಮಾಡಲಾಗುವುದು. ಯಾದಗಿರಿ ಜಿಲ್ಲೆಯ ಶಹಾಪುರ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ₹ 292.98 ಕೋಟಿಗಳ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಯಿತು.

ಗದಗ, ಕೊಪ್ಪಳ, ಚಾಮರಾಜನಗರದಲ್ಲಿನ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಹಾಗೂ ಪೀಠೋಪಕರಣಗಳನ್ನು ₹149.03 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ₹ 135 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಬಾಂದಾರು ಸಹಿತ ಸೇತುವೆ ನಿರ್ಮಾಣ ಕಾಮಗಾರಿಗೆ ₹ 130 ಕೋಟಿ ಒದಗಿಸಲು ಅನುಮೋದನೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ₹ 132 ಕೋಟಿ ಒದಗಿಸಲು ಅನುಮೋದನೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ. ಕುಲಪತಿಗಳ ನೇಮಕಾತಿಯನ್ನು ಇನ್ನು ಮುಂದೆ ರಾಜ್ಯ ಸರ್ಕಾರವೇ ಮಾಡಲು ತೀರ್ಮಾನ. 

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕೆಕೆಆರ್‌ಡಿಬಿ ಅನುದಾನದಿಂದ ಮೊದಲನೇ ಹಂತದಲ್ಲಿ ₹ 53.25 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ. 

ಕೊಪ್ಪಳ ಜಿಲ್ಲೆಯ ತಳಕಲ್‌ನಲ್ಲಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ₹ 53.25 ಕೋಟಿ.

ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್‌ಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ಮತ್ತು ಇತರೆ ಕಾಮಗಾರಿಗಳಿಗೆ ₹ 116 ಕೋಟಿ, ಭೀಮಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ₹ 35 ಕೋಟಿ, ವಿದ್ಯುತ್‌ ಪವರ್‌ ಸ್ಟೇಷನ್‌ಗೆ ₹ 229.28 ಕೋಟಿ, ರಸ್ತೆ ನಿರ್ಮಾಣಕ್ಕೆ ₹ 9.98 ಕೋಟಿ ಸೇರಿ ಒಟ್ಟು ₹ 390.26 ಕೋಟಿ ನೀಡಲು ಅನುಮೋದನೆ.

ಬೀದರ್‌ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ ₹ 15 ಕೋಟಿ, ಬೀದರ್‌ ತಾಲ್ಲೂಕಿನ ಶಾಹಪೂರ ಮೀಸಲು ಅರಣ್ಯ ಪ್ರದೇಶದಲ್ಲಿನ ದೇವ ದೇವ ವನ ಟ್ರೀ ಪಾರ್ಕ್‌ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿಗಳನ್ನು ₹ 16.12 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ. 

ಕಲಬುರಗಿ ತಾಲ್ಲೂಕಿನ ತಾವರಗೇರಾ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ ಶೇ 50:50ರ ಅನುಪಾತದ ಪಾಲುದಾರಿಕೆಯಡಿ ಒಟ್ಟು 286 ಎಕರೆ 28 ಗುಂಟೆ ಜಮೀನಿನ ಪೈಕಿ ಮೊದಲನೇ ಹಂತದಲ್ಲಿ 87 ಎಕರೆ 34 ಗುಂಟೆ ಜಮೀನನ್ನು ಭೂಮಾಲೀಕರಿಂದ ಪಡೆದು, ವಸತಿ ಯೋಜನೆ ಕೈಗೊಳ್ಳಲು ಅನುಮೋದನೆ ನೀಡಲಾಯಿತು.

ಸಿಂಧನೂರು ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲು ಸಿಂಧನೂರು ನಗರಸಭೆಯ ಬಳಿ ಲಭ್ಯವಿರುವ 119.11 ಎಕರೆ ಜಮೀನಿನಲ್ಲಿ ಮೊದಲನೇ ಹಂತದಲ್ಲಿ ರೂ.29.80 ಕೋಟಿಗಳ ಅಂದಾಜು ಮೊತ್ತದಲ್ಲಿ ಕೆರೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಕೊಪ್ಪಳ ಜಿಲ್ಲೆಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣ (15 ಕೋರ್ಟ್‌ ಹಾಲ್)‌ ನಿರ್ಮಾಣ ಕಾಮಗಾರಿಯನ್ನು ₹ 56 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು. ಚಿತ್ತಾಪುರ ತಾಲ್ಲೂಕಿನ ತೆಲಂಗಾಣ ಗಡಿ ಪುಟಪಾಕ –ಬೋಸ್ಗಾ ರಾಜ್ಯ ಹೆದ್ದಾರಿ–ಕಾಗಿಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ₹ 53 ಕೋಟಿ.

ಕಲಬುರಗಿ ಜಿಲ್ಲೆಯಲ್ಲಿ 515 ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ₹ 118.45 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಯಿತು. ಸೇಡಂ ತಾಲ್ಲೂಕಿನ ಬರ ಪೀಡಿತ ಪ್ರದೇಶಗಳಿಗೆ ಕಾಚುರ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆಗೆ ₹ 82.50 ಕೋಟಿಗೆ ಅನುಮೋದನೆ.

ಹಾಸ್ಟೆಲ್‌ಗಳಿಗೆ ₹ 298 ಕೋಟಿ

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 12 ಪರಿಶಿಷ್ಟ ಜಾತಿ ಮತ್ತು ಒಂದು ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಿಗೆ ಲಭ್ಯವಿರುವ ನಿವೇಶನಗಳಲ್ಲಿ ₹ 286 ಕೋಟಿ ಮೊತ್ತದಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ (ಪರಿಶಿಷ್ಟ ಜಾತಿ) ಕಟ್ಟಡವನ್ನು ₹ 12 ಕೋಟಿ ನೀಡಲು ಒಪ್ಪಿಗೆ.  ತಾಲ್ಲೂಕುಗಳ ಸ್ಥಿತಿಗತಿ ಪರಿಶೀಲನೆಗೆ ಸಮಿತಿ 2002ರಲ್ಲಿ ಡಿ.ಎಂ. ನಂಜುಂಡಪ್ಪ ವರದಿಯಂತೆ ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲು ಸಮಿತಿ ರಚಿಸಲಾಗಿತ್ತು. ಪ್ರಸ್ತುತ ಈ ಭಾಗದ ತಾಲ್ಲೂಕುಗಳ ಸ್ಥಿತಿಗತಿಯ ಪರಿಶೀಲನೆ ನಡೆಸಲು ಆರ್ಥಿಕ ತಜ್ಞ ಗೋವಿಂದ ರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.  ಈ ಸಮಿತಿಯು ನಂಜುಂಡಪ್ಪ ಅವರು ಹಿಂದುಳಿದ ತಾಲ್ಲೂಕುಗಳೆಂದು ಉಲ್ಲೇಖಿಸಿದ್ದ ತಾಲ್ಲೂಕುಗಳಿಗೆ ಭೇಟಿ ನೀಡಿ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಲಿದೆ ಎಂದರು.

ಪ್ರವಾಸೋದ್ಯಮಕ್ಕೆ ಭರಪೂರ ಅನುದಾನ

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭರಪೂರ ಅನುದಾನ ಒದಗಿಸಲಾಗಿದೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯಗಳ ಕಾಮಗಾರಿಗಳಿಗಾಗಿ ₹ 100 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ 77.28 ಎಕರೆ ಖಾಸಗಿ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ₹ 29.51 ಕೋಟಿ ಕೊಪ್ಪಳ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಯಿತು. ಬೀದರ್‌ನ ನಗರದ ಅಂತರ್ಗತ ನೀರು ಪೂರೈಕೆ ವ್ಯವಸ್ಥೆಯಾದ ಕರೇಜ್‌ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ₹ 95 ಕೋಟಿಗಳ ವೆಚ್ಚ ಮಾಡಲು ಅನುಮೋದನೆ. ಚಿತ್ತಾಪುರದ ನಾಗಾವಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಕಾಮಗಾರಿಗೆ ₹ 68 ಕೋಟಿ ಯಾದಗಿರಿ ಕೋಟೆಯ ಸಮಗ್ರ ಅಭಿವೃದ್ಧಿ ಮತ್ತು ಸಂರಕ್ಷಣೆ ಕಾಮಗಾರಿಗೆ ₹ 95 ಕೋಟಿ ಒದಗಿಸಲು ಒಪ್ಪಿದೆ. ಶಹಾಪುರ ತಲ್ಲೂಕಿನ ಸಿರವಾಳ ಗ್ರಾಮದ ದೇವಾಲಯಗಳ ಸಮಗ್ರ ಅಭಿವೃ‍ದ್ಧಿ ಮತ್ತು ಸಂರಕ್ಷಣಾ ಕಾಮಗಾರಿಗೆ ₹ 75 ಕೋಟಿ ಸೇಡಂ ತಾಲ್ಲೂಕಿನ ಮಳಖೇಡ ಕೋಟೆ ಸಂರಕ್ಷಣೆ ಮತ್ತು ಮೂಲಸೌಕರ್ಯಗಳ ಅಭಿವೃ‍ದ್ಧಿ ಕಾಮಗಾರಿಗೆ ₹ 34 ಕೋಟಿ ಹಂಪಿಯಲ್ಲಿನ ಪ್ರಮುಖ ಸ್ಮಾರಕಗಳಿಗೆ ಧ್ವನಿ ಮತ್ತು ಬೆಳಕು ವ್ಯವಸ್ಥೆ ₹ 45 ಕೋಟಿಗಳ ಅಂದಾಜು ಮೊತ್ತದಲ್ಲಿ ಕಲ್ಪಿಸಲು ಹಾಗೂ ಹಂಪಿ ಸಮೀಪದ ಕಮಲಾಪುರದಲ್ಲಿ ₹ 15 ಕೋಟಿ ವೆಚ್ಚದಲ್ಲಿ ಡಾರ್ಮಿಟರಿ ನಿರ್ಮಾಣ. ಮಸ್ಕಿಯ ಅಶೋಕನ ಶಿಲಾಶಾಸನ ಪ್ರದೇಶದಲ್ಲಿ ₹ 10 ಕೋಟಿ ಅಂದಾಜಿನಲ್ಲಿ ಪ್ರವಾಸಿ ಸೌಲಭ್ಯ ಒದಗಿಸಲು ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.