ADVERTISEMENT

Caste Census | ಸಮೀಕ್ಷೆ ಮುಂದೂಡಲು ಪಂಚಪೀಠಾಧಿಪತಿಗಳ ಆಗ್ರಹ

ವೀರಶೈವ ಸಮುದಾಯವನ್ನು ಒಂದೇ ಗುಂಪಾಗಿ ಪರಿಗಣಿಸಲು ಪಂಚಪೀಠಾಧಿಪತಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ. 22ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಹಳಷ್ಟು ಲೋಪ ದೋಷಗಳಿದ್ದು, ಸಮೀಕ್ಷೆಯನ್ನು ಮುಂದೂಡಬೇಕು’ ಎಂದು ಪಂಚಪೀಠಾಧಿಪತಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ADVERTISEMENT

ಈ ಕುರಿತು ಜಂಟಿ ಪತ್ರಿಕಾ ಹೇಳಿ ಬಿಡುಗಡೆ ಮಾಡಿರುವ ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಮತ್ತು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು, ‘ಹಿಂದುಳಿದ ಆಯೋಗವು ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಂದೇ ಗುಂಪಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮುದಾಯದಲ್ಲಿ ನೂರಾರು ಕಸುಬುಗಳನ್ನು ಮಾಡುವ ಉಪಪಂಗಡಗಳಿವೆ. ಆದರೆ ಆಯೋಗ ಪ್ರಕಟಿಸಿರುವ ಜಾತಿವಾರು ಪಟ್ಟಿಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೋಡ್ ಸಂಖ್ಯೆಗಳಲ್ಲಿ ಸಾಕಷ್ಟು ಗೊಂದಲಗಳಿವೆ’ ಎಂದಿದ್ದಾರೆ.

‘ಸಮುದಾಯದ ಜನರು ಗೊಂದಲಕ್ಕೊಳಗಾಗಿ ವೀರಶೈವ, ಲಿಂಗಾಯತ, ವೀರಶೈವ ಲಿಂಗಾಯತ, ಲಿಂಗಾಯತ ವೀರಶೈವ ಅಥವಾ ತಮ್ಮ ತಮ್ಮ ಉಪಜಾತಿಗಳ ಹೆಸರನ್ನು ಮೊದಲು ಬರೆದರೂ ಆ ಎಲ್ಲ ಪದಗಳನ್ನೂ ವೀರಶೈವ ಲಿಂಗಾಯತ ಎಂಬ ಒಂದೇ ಗುಂಪು ಎಂದು ಪರಿಗಣಿಸಿ ತಮ್ಮ ದತ್ತಾಂಶವನ್ನು ಸಿದ್ಧಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಸಮೀಕ್ಷೆಯಲ್ಲಿ ಜಾತಿ ನಮೂದು ಮುಖ್ಯವಾಗಿದೆ. ಒಂದೊಮ್ಮೆ ಸಮೀಕ್ಷೆ ನಡೆದರೆ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯಲ್ಲಿ ವೀರಶೈವ ಲಿಂಗಾಯತ ಎಂದು ಉಪಜಾತಿಯಲ್ಲಿ ಅವರವರ ಪಂಗಡದ ಹೆಸರು ಬರೆಯಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.