ಕಲಬುರಗಿ: ‘ನಮ್ಮ ದೇಶ ವಿಚಿತ್ರವಾಗಿದೆ. ನಾವು ಆಕಳು, ಕರು, ಎತ್ತಿಗೆ ಪೂಜೆ ಮಾಡುತ್ತೇವೆ. ಆದರೆ, ಮನುಷ್ಯರನ್ನೇ ಮುಟ್ಟಿಸಿಕೊಳ್ಳದಂಥ ವ್ಯವಸ್ಥೆ ದೇಶದಲ್ಲಿದೆ. ಇದು ಬದಲಾಗಲು ಸಾಮಾಜಿಕ ಕ್ರಾಂತಿ ಅಗತ್ಯ’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
‘ಮೂಲ ಉತ್ಪಾದನೆ ಮಾಡದೇ ಸಮಾಜ ನಡೆಯಲ್ಲ. ಆದರೂ ಮಂತ್ರ, ತಂತ್ರ, ಯಜ್ಞ, ಪೂಜಾ–ಪಾಠ ಮಾಡುವವರಿಗೇ ಬೆಲೆಯಿದೆ. ದುಡಿಯುವ ವರ್ಗವನ್ನು ಹಿಂದುಳಿದವರು, ಕೆಳಸ್ತರದವರು ಎಂದು ಕನಿಷ್ಠವಾಗಿ ಕಾಣಲಾಗುತ್ತದೆ. ಈ ವ್ಯವಸ್ಥೆಯಿಂದ ಇನ್ನೂವರೆಗೂ ನಾವು ಹೊರಗೆ ಬಂದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ಚೀನಾ, ರಷ್ಯಾ ಸೇರಿದಂತೆ ವಿಶ್ವದ ಹಲವೆಡೆ ಕ್ರಾಂತಿ ನಡೆದಿದೆ. ದುಡಿಯುವ ವರ್ಗಕ್ಕೆ ಗೌರವ ದಕ್ಕಿದೆ, ಸಮಾನತೆ ಸಿಕ್ಕಿದೆ. ಗಂಟೆ ಹೊಡೆಯುವವರಿಗೆ, ಪೂಜೆ ಮಾಡುವವರಿಗೆ ಅಲ್ಲಿ ಬೆಲೆಯಿಲ್ಲ’ ಎಂದರು.
‘ಡಾ.ಅಂಬೇಡ್ಕರ್ ದೀನರು, ದಲಿತರು, ಹಿಂದುಳಿದವರರ ಪರವಾಗಿ ಧ್ವನಿ ಎತ್ತಿದ್ದರೂ ದೇಶದಲ್ಲಿ ಇಂದಿಗೂ ಸಮಾನತೆ ಸಾಧ್ಯವಾಗಿಲ್ಲ. ಮುಂದೆಯೂ ಸಮಾನತೆ ಬರುವ ವಿಶ್ವಾಸವಿಲ್ಲ. ಇದು ಅಪ್ಪಟ ಜಾತಿವಾದಿ ರಾಷ್ಟ್ರ. ಇಲ್ಲಿ ಒಂದು ಜಾತಿ ಇನ್ನೊಂದು ಜಾತಿಯನ್ನು ಕಾಲುಹಿಡಿದು ಎಳೆಯುತ್ತದೆ. ಯಾರಿಗೂ ಮೇಲೇರಲು ಬಿಡಲ್ಲ. ಮೇಲಿನವರು ಮೇಲೆಯೇ ಉಳಿಯುತ್ತಾರೆ. ಕೆಳಗಿನವರು ಕೆಳಗೇ ಉಳಿಯುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಿಯುಸಿಯ ಆರು ಹಾಗೂ ಎಸ್‌ಎಸ್‌ಎಲ್‌ಸಿಯ ಒಂಬತ್ತು ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಾಯಬಣ್ಣ ಹೆಳವರ ಸ್ವಾಗತಿಸಿದರು.
ದುಮ್ಮನಸೂರು ಮುಕ್ತಿನಾಥಯ್ಯ ಹೆಳವ ಸಮಾಜದ ಮಠದ ಅಧ್ಯಕ್ಷ ಶಂಕರಲಿಂಗ ಸ್ವಾಮೀಜಿ, ಕೂಡಿಹಳ್ಳಿಯ ಹೆಳವ ಸಮಾಜ ಮಠದ ಅಧ್ಯಕ್ಷ ಬಸವಭೃಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಬಕಾರಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಹೆಳವರ, ಇಪಿಎಫ್‌ಒ ಕಚೇರಿಯ ಬಸವರಾಜ ಹೆಳವರ, ಕುಮಾರ ಯಾದವ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಹೆಳವ ಸಮುದಾಯ ಎಸ್ಟಿ ಸೇರ್ಪಡೆಗಾಗಿ ರಾಜ್ಯಮಟ್ಟದಲ್ಲಿ ಬೃಹತ್ ಹೋರಾಟ ಸಮಾವೇಶ ನಡೆಸಿ ಸರ್ಕಾರದ ಕಣ್ಣು–ಕಿವಿ ತೆರಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಡ ಹೇರಬೇಕು.ಮಹಾಂತೇಶ ಕೌಲಗಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ
‘ದುಡಿದು ಅನ್ನ ಹಾಕುವವರೇ ದೇವರು’ ‘ದೇವರು ಇಲ್ಲವೇ ಇಲ್ಲ. ದೇವರು ಸಿಕ್ಕಿದ್ದರೆ ಅಸಮಾನತೆ ಬಗೆಗೆ ಶರಣರು ಕೇಳುತ್ತಿರಲಿಲ್ಲವೇ? ದುಡಿದು ಅನ್ನ ಹಾಕುವವರೇ ದೇವರು. ಆದರೆ ಅವರನ್ನು ಕನಿಷ್ಠ ಮಾಡಲಾಗಿದೆ. ಹೀಗಾಗಿ ದೇಶದಲ್ಲಿ ಕ್ರಾಂತಿಯಾಗುತ್ತಿಲ್ಲ. ದೇಹವನ್ನು ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಗಳೆಂದು ವಿಂಗಡಿಸಿ ಕೆಲಸ ಮಾಡದವರೆಲ್ಲ ಸೇರಿ ಕಾಲಿಗೆ ಕನಿಷ್ಠ ಮಾಡಿದ್ದಾರೆ’ ಎಂದು ಎಸ್.ಕೆ.ಕಾಂತಾ ಅಭಿಪ್ರಾಯಪಟ್ಟರು. ‘ದುಡಿದು ತಿನ್ನುವವರು ನಿಮ್ಮ ಹಕ್ಕನ್ನು ಪಡೆಯಬೇಕು. ಉಪವಾಸ ಸತ್ತರೂ ಯಾರ ಕಾಲಿಗೂ ಬೀಳಬೇಡಿ. 12ನೇ ಶತಮಾನದಲ್ಲಿ ಕ್ರಾಂತಿಕಾರಿ ವ್ಯವಸ್ಥೆಯಿತ್ತು. ಶರಣ ಕಾಲದಲ್ಲಿ ಅನೇಕರು ಲಿಂಗಕಟ್ಟಿಕೊಂಡು ಲಿಂಗಾಯತರಾಗಿದ್ದರು. ಈಗ ಲಿಂಗಾಯತರು ಬ್ರಾಹ್ಮಣರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.