
ಪ್ರಜಾವಾಣಿ ವಾರ್ತೆ
ವಾಡಿ: ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೇ ಕರೆಸಿಕೊಳ್ಳುವ ಎಳ್ಳ ಅಮಾವಾಸ್ಯೆ ಹಬ್ಬವನ್ನು ಶುಕ್ರವಾರ ಗ್ರಾಮೀಣ ಭಾಗದ ರೈತರು ಸಡಗರದಿಂದ ಆಚರಿಸಿದರು. ತಮ್ಮ ಜಮೀನುಗಳಲ್ಲಿ ಚರಗ ಚೆಲ್ಲಿ ಭೂತಾಯಿಗೆ ಭಕ್ತಿಯ ನೈವೇದ್ಯ ಸಮರ್ಪಿಸಿದರು.
ನಾಲವಾರ, ಕೊಲ್ಲೂರು, ಹಲಕರ್ಟಿ, ಲಾಡ್ಲಾಪುರ, ಚಾಮನೂರು, ಹಣ್ಣಿಕೇರಾ, ಅಲಹಳ್ಳಿ, ಯಾಗಾಪುರ, ಕಡಬೂರ, ಇಂಗಳಗಿ, ರಾವೂರು, ಭಾಪುನಗರ ಸಹಿತ ವಿವಿಧ ಹಳ್ಳಿಗಳಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ ಜೋರಾಗಿ ಕಂಡುಬಂದಿತು.
ಹೊಲಗದ್ದೆಗಳಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದ ಬಳಿಕ ಜಮೀನು ತುಂಬೆಲ್ಲಾ ಸುತ್ತಾಡಿ ಚರಗ ಚೆಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ತೊಗರಿ ಸಹಿತ ಮುಂಗಾರು ಹಂಗಾಮಿನ ಬೆಳೆಗಳು ನಿರೀಕ್ಷಿತ ಲಾಭ ನೀಡದ ಕೊರಗಿನ ಮಧ್ಯೆ ಭೂತಾಯಿಗೆ ನೈವೇದ್ಯ ಸಮರ್ಪಿಸುವ ಮೂಲಕ ಹಿಂಗಾರು ಬೆಳೆಯನ್ನಾದರೂ ದಕ್ಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.
ಮನೆಯಲ್ಲಿ ತಯಾರಿಸಿದ ಹೋಳಿಗೆ, ಜೋಳದ ಕಡುಬು, ಪುಂಡಿಪಲ್ಯೆ, ಕರ್ಚಿಕಾಯಿ ಸಹಿತ ಹಲವು ಬಗೆಯ ಅಡುಗೆ ತಯಾರಿಸಿಕೊಂಡು ಚಕ್ಕಡಿ, ಬೈಕ್ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಬೆಳಿಗ್ಗೆಯೇ ಜಮೀನಿನ ಕಡೆ ಮುಖ ಮಾಡಿದ್ದ ರೈತಸಮುದಾಯ ಜಮೀನಿನಲ್ಲಿಯೇ ಸಾಮೂಹಿಕವಾಗಿ ಕುಳಿತು ಭೋಜನ ಸವಿಯುತ್ತಿರುವುದು ಕಂಡು ಬಂದಿತು.
ನಾಲವಾರ ವಲಯದಲ್ಲಿ ಅತಿ ಹೆಚ್ಚು ಬಿತ್ತನೆಯ ಶೇಂಗಾ ಬೆಳೆಗೆ ಚರಗ ಚೆಲ್ಲಿ ಭೂತಾಯಿಗೆ ಭಕ್ತಿಭಾವ ಸಮರ್ಪಿಸುತ್ತಿರುವುದು ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.