
ಕಲಬುರಗಿ: ಇಲ್ಲಿಗೆ ಸಮೀಪದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಕಲಿಕಾ ತಾಣ. ಪ್ರಾದೇಶಿಕ ಭಾಷೆಗಳ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ನಿರರ್ಗಳ ಇಂಗ್ಲಿಷ್ ‘ಕಬ್ಬಿಣದ ಕಡಲೆ’ಯೇ ಸರಿ. ಈ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಂವಹನ ಸುಧಾರಿಸುವ ಕೆಲಸವನ್ನು ವಿವಿಯ ಇಂಗ್ಲಿಷ್ ಭಾಷಾ ಕಲಿಕಾ ಕೇಂದ್ರ (ಸೆಲ್ಟ್) ಮಾಡುತ್ತಿದೆ.
ಇಂಗ್ಲಿಷ್ ವಿಭಾಗದ ಅಂಗವಾಗಿರುವ ‘ಸೆಲ್ಟ್’ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್.ಡಿ ಸಂಶೋಧನಾರ್ಥಿಗಳು ಸೇರಿದಂತೆ ವೃತ್ತಿಪರರಿಗೂ ಅಗತ್ಯಕ್ಕೆ ತಕ್ಕಂತೆ ಇಂಗ್ಲಿಷ್ ಭಾಷೆ ಕಲಿಸುತ್ತಿದೆ. ಒಬ್ಬರು ನಿರ್ದೇಶಕ, ಒಬ್ಬ ಸಹಾಯಕ ನಿರ್ದೇಶಕರಲ್ಲದೇ ಮೂವರು ತರಬೇತಿದಾರರನ್ನು ಹೊಂದಿದೆ.
ಈ ಕುರಿತು ಗುರುವಾರ ಮಾತನಾಡಿದ ಕೇಂದ್ರ ಸಹಾಯಕ ನಿರ್ದೇಶಕ ಪ್ರಕಾಶ ಬಾಳಿಕಾಯಿ, ‘ವೈವಿಧ್ಯಮಯ ವಿಭಾಗಗಳ ಹಿನ್ನೆಲೆಯ ಕಲಿಕಾರ್ಥಿಗಳ ಜ್ಞಾನದ ಮಟ್ಟದ ಆಧರಿಸಿ ಅವರ ಇಂಗ್ಲಿಷ್ ಪದಗಳ ಕಲಿಕೆ, ಅವುಗಳ ಉಚ್ಚಾರಣೆ, ಬರಹದ ಶೈಲಿ, ಸಂವಹನ ಸುಧಾರಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಅಲ್ಪಾವಧಿ (3 ತಿಂಗಳು), ದೀರ್ಘಾವಧಿ (6 ತಿಂಗಳು) ಹಾಗೂ ಕ್ರಾಶ್‌ಕೋರ್ಸ್‌ಗಳನ್ನು (2 ವಾರ) ಪರಿಚಯಿಸಲಾಗಿದೆ. ನಿತ್ಯ ಬೆಳಿಗ್ಗೆ 7.30ರಿಂದ 9.30 ಹಾಗೂ ಸಂಜೆ 5.30ರಿಂದ 7.30ರ ತನಕ ಹಲವು ತಂಡಗಳಲ್ಲಿ ಕಲಿಕೆ ಸಾಗಿದೆ. ಇವೆಲ್ಲವೂ ಉಚಿತ’ ಎಂದರು.
‘ವಿಭಿನ್ನ ಶೈಕ್ಷಣಿಕ ಕೋರ್ಸ್‌ಗಳ ಹಿನ್ನೆಲೆ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಅವರಿಗೆ ಇಂಗ್ಲಿಷ್ ಭಾಷಾ ಸಂವಹನ ಕೌಶಲ ಕಲಿಸಿ ತಮ್ಮ ತಾಯ್ನುಡಿಯಷ್ಟೇ ಸುಲಲಿತವಾಗಿ ಸಂವಹನ ನಡೆಸುವಂತೆ ಸಜ್ಜುಗೊಳಿಸುವುದು ಇದರ ಉದ್ದೇಶ’ ಎಂದು ಮಾಹಿತಿ ನೀಡಿದರು.
ಸೆಲ್ಟ್ ಕೇಂದ್ರವು ಪ್ರಾದೇಶಿಕ ಅಂತರ್ಜಾಲ (ಎಲ್‌ಎಎನ್), ವೈಫೈ, ಸಂಪರ್ಕ, ಸಂವಾದಾತ್ಮಕ ಸ್ಮಾರ್ಟ್‌ಬೋರ್ಡ್, 40 ಕಂಪ್ಯೂಟರ್‌ಗಳ ಭಾಷಾ ಲ್ಯಾಬ್ ಹಾಗೂ ಅತ್ಯಾಧುನಿಕ ಇಂಗ್ಲಿಷ್ ಭಾಷಾ ಪ್ರಯೋಗಾಲಯ ತಂತ್ರಜ್ಞಾನ ಸೌಲಭ್ಯಗಳನ್ನು (ವಿಸನ್‌ನೆಟ್) ಹೊಂದಿದೆ ಎಂದು ತರಬೇತುದಾರ ಅನಿಲ ಕಾಂಬಳೆ ಹೇಳಿದರು.
ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಶ್ರೇಷ್ಠತೆ ಸಾಧಿಸುವ ಮೂಲಕ ಅವರನ್ನು ಸದೃಢರನ್ನಾಗಿಸುವುದು, ಅವರನ್ನು ಜಾಗತಿಕ ಸಂವಹನಕ್ಕೆ ಅಣಿಗೊಳಿಸುವುದು ಇದರ ಉದ್ದೇಶ. ಜೊತೆಗೆ ಆಜೀವ ಕಲಿಕೆ, ಬೌದ್ಧಿಕ ಕುತೂಹಲ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ ಉತ್ತೇಜಿಸಲು ಇದು ನೆರವಾಗಲಿದೆ ಎನ್ನುತ್ತಾರೆ ಮತ್ತೊಬ್ಬ ತರಬೇತುದಾರ ಸುನೀಲಕುಮಾರ ಪಾಂಡೆ.
ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಭಾಷಾ ಕೌಶಲವೃದ್ಧಿಸಿ ಅಣಿಗೊಳಿಸುವುದು, ಶೈಕ್ಷಣಿಕ ಹಾಗೂ ವೃತ್ತಿಪರ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆ ವೃದ್ಧಿಸುವ ಉದ್ದೇಶವನ್ನು ಸೆಲ್ಟ್ ಹೊಂದಿದೆ.