ADVERTISEMENT

2 ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮಹಿಳೆಗೆ

ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವ.ಚ. ಚನ್ನೇಗೌಡ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:53 IST
Last Updated 19 ಏಪ್ರಿಲ್ 2021, 4:53 IST
ವ.ಚ.ಚನ್ನೇಗೌಡ
ವ.ಚ.ಚನ್ನೇಗೌಡ   

ಕಲಬುರ್ಗಿ: ‘ಹಲವು ವರ್ಷಗಳಿಂದಲೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮಹಿಳೆಗೆ ಸಿಕ್ಕಿಲ್ಲ. ಈ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದರೆ ನನ್ನ ಅವಧಿಯ ಐದು ವರ್ಷಗಳ ಪೈಕಿ ಎರಡು ವರ್ಷಗಳ ಅಧ್ಯಕ್ಷ ಸ್ಥಾನವನ್ನು ಮಹಿಳಾ ಸಾಹಿತಿಗೆ ಕೊಡಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವ.ಚ.ಚನ್ನೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ. ಮನು ಬಳಿಗಾರ್ ಅವರು ಅಧ್ಯಕ್ಷರಾದ ಅವಧಿಯಲ್ಲಿ ನಾಲ್ಕು ವರ್ಷ ಎಂಟು ತಿಂಗಳು ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ. ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷನಾಗಿ ರಾಜ್ಯದಾದ್ಯಂತ ಸಂಚರಿಸಿರುವೆ. ಕನ್ನಡ ಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವೆ‌‌’ ಎಂದರು.

‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಮನವೊಲಿಸಿ ಕಸಾಪದಲ್ಲಿ 2007ರಲ್ಲೇ ₹ 1.5 ಕೋಟಿ ಮೊತ್ತದ ದತ್ತಿ ಸ್ಥಾಪಿಸಿ ಪ್ರತಿ ವರ್ಷ ನಾಡಿನ ಹಿರಿಯ ಸಾಹಿತಿಯೊಬ್ಬರಿಗೆ ₹ 7 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ನೀಡುವಂತೆ ಮಾಡಿರುವೆ. 45 ವರ್ಷದ ‍ಒಳಗಿನ ಐವರು ಬರಹಗಾರರಿಗೆ ತಲಾ ₹ 25 ಸಾವಿರ ನಗದು ಪುರಸ್ಕಾರದೊಂದಿಗೆ ‘ಮಯೂರ ವರ್ಮ’ ಪ‍್ರಶಸ್ತಿ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಅಧ್ಯಕ್ಷನಾಗಿ ಆಯ್ಕೆಯಾದರೆ ಕಸಾಪದಲ್ಲಿ ಶಾಶ್ವತ ನಿಘಂಟು ವಿಭಾಗ ಸ್ಥಾಪಿಸುವೆ. ಮಹತ್ವದ ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸಲು ಕ್ರಮ ಕೈಗೊಳ್ಳುವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದು, ಪುಸ್ತಕ ಖರೀದಿ ಸೇರಿದಂತೆ ಪರಿಷತ್ತಿನ ಎಲ್ಲ ಚಟುವಟಿಕೆಗಳು ಆನ್‌ಲೈನ್ ಮೂಲಕ ನಡೆಯುವಂತೆ ಮಾಡುತ್ತೇನೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ ಸಬಲೀಕರಣ ಸಮಿತಿಯ ವರದಿ ಅನುಷ್ಠಾನವಾಗುವಂತೆ ನೋಡಿಕೊಳ್ಳುವುದು, ಯುವ ಬರಹಗಾರರಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಅಶಕ್ತ ಸಾಹಿತಿಗಳು, ಕಲಾವಿದರಿಗೆ ಆರೋಗ್ಯ ವಿಮೆ ಜಾರಿಗೊಳಿಸಲಾಗುವುದು, ಎಲ್ಲ ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸಲಾಗುವುದು. ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಲು ಹಾಗೂ ಅದಕ್ಕೆ ಆಂಧ್ರಪ್ರದೇಶ ಮಾದರಿ ಕಾನೂನು ಬಲ ತಂದುಕೊಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು. ನಾಲ್ಕು ಕಂದಾಯ ವಲಯಗಳಲ್ಇ ಮಹಿಳಾ, ದಲಿತ, ವಚನ ಹಾಗೂ ದಾಸ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳ ಸಮಾವೇಶ ನಡೆಸಲಾಗುವುದು ಎಂದರು.

ಸಾಹಿತಿ ಡಾ.ಚಿ.ಸಿ. ನಿಂಗಣ್ಣ ಮಾತನಾಡಿ, ‘ಚನ್ನೇಗೌಡ ಅಧ್ಯಕ್ಷರಾಗಿ ಆಯ್ಕೆಯಾದರೆ ಜಿಲ್ಲೆಯ ಐತಿಹಾಸಿಕ ಕೇಂದ್ರವಾದ ನಾಗಾವಿಯನ್ನು ಅಭಿವೃದ್ಧಿಪಡಿಸಬೇಕು’ ಎಂದರು.

ಕರವೇ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ‘ಅಧ್ಯಕ್ಷರ ಸೂಚನೆಯಂತೆ ರಾಜ್ಯದಾದ್ಯಂತ ಚನ್ನೇಗೌಡ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದೇವೆ’ ಎಂದರು.

ನಾನಾಸಾಹೇಬ ಪಾಟೀಲ, ಎಸ್‌.ಎಸ್‌. ಸಜ್ಜನ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.