
ಕಾಳಗಿ ತಾಲ್ಲೂಕಿನ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಸ್ಥರು ಗುರುವಾರ ರಾಜ್ಯಹೆದ್ದಾರಿ-32ರ ಹೊಡೆಬೀರನಹಳ್ಳಿ ಕ್ರಾಸ್ ಬಳಿ ಪ್ರತಿಭಟನೆಯ ಮಧ್ಯೆ ಊಟ ಮಾಡಿದರು
ಕಾಳಗಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳದರ್ಜೆಗಿಳಿಸಿ ಆದೇಶಿಸಿದ ಕ್ರಮವನ್ನು ಖಂಡಿಸಿ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಸ್ಥರು ಗುರುವಾರ ರಾಜ್ಯಹೆದ್ದಾರಿ-32 ತಡೆದು ಪ್ರತಿಭಟಿಸಿದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಿಂಚೋಳಿ-ಕಲಬುರಗಿ ಮುಖ್ಯರಸ್ತೆ ಮಾರ್ಗದ ಉಮ್ಮರ್ಗಾ-ಸುಲೇಪೇಟ ರಾಜ್ಯಹೆದ್ದಾರಿ-32ರ ಹೊಡೆಬೀರನಹಳ್ಳಿ ಕ್ರಾಸ್ ಬಳಿ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಜನರು ಹೆದ್ದಾರಿ ತಡೆದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.
‘ನಮಗೆ ಆರೋಗ್ಯ ಮತ್ತು ಜೀವ ಮುಖ್ಯ. ನಮ್ಮ ಸಿಎಚ್‌ಸಿಯನ್ನು ಯಾವುದೇ ಕಾರಣಕ್ಕೂ ಪಿಎಚ್‌ಸಿಯನ್ನಾಗಿ ಮಾಡಲು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಗುಡುಗಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನವಿಪತ್ರ ತೆಗೆದುಕೊಳ್ಳಲು ಬಂದ ಚಿಂಚೋಳಿ ಟಿಎಚ್ಒ ಡಾ.ಮಹಮ್ಮದ ಗಫರ್, ಕೋಡ್ಲಿ ಉಪತಹಶೀಲ್ದಾರ್ ರವೀಂದ್ರ ಅವರಿಗೆ ಮನವಿಪತ್ರ ನೀಡದೆ, ನಿಮ್ಮ ಮೇಲಧಿಕಾರಿಗಳು ಬಂದರೆ ಮಾತ್ರ ಸಲ್ಲಿಸುವುದಾಗಿ ಪಟ್ಟು ಹಿಡಿದು ಕುಳಿತರು.
ಹೋರಾಟ ಮುಂದುವರೆದು ಬಿಸಿಲು, ಹಸಿವು ಹೆಚ್ಚಾದೊಡನೆ 1.15ರ ವೇಳೆಗೆ ಹೆದ್ದಾರಿಯಲ್ಲೇ ಊಟ ಮಾಡಿ ಪ್ರತಿಭಟನೆ ಚುರುಕುಗೊಳಿಸಿದರು. ಈ ವೇಳೆ ಬಂದ ಕಾಳಗಿ ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ ಅವರಿಗೂ ಮನವಿಪತ್ರ ನೀಡದೆ ಆಕ್ರೋಶ ವ್ಯಕ್ತಪಡಿಸಿದರು.
3.30ರ ಸುಮಾರಿಗೆ ಆಗಮಿಸಿದ ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಅವರಿಗೆ ಮನವಿ ಸಲ್ಲಿಸಿ; ‘ನಮ್ಮೂರಲ್ಲಿ 30 ವರ್ಷಗಳಿಂದ ಸಿಎಚ್‌ಸಿ ಇದೆ. ಸುತ್ತಲಿನ ಜನತೆಗೂ ಉತ್ತಮ ಸೇವೆ ದೊರೆಯುತ್ತಿದೆ. ಇದನ್ನು ಹೊರತುಪಡಿಸಿದರೆ 25 ಕಿ.ಮೀ ವರೆಗೂ ಸಿಎಚ್‌ಸಿ ಲಭ್ಯವಿಲ್ಲ. ಸರ್ಕಾರ ಕೂಡಲೇ ಡಿ–ಗ್ರೇಡ್ ಆದೇಶ ಹಿಂಪಡೆದು ಸಿಎಚ್‌ಸಿ ಮುಂದುವರೆಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಲಾಗುವುದು. ಈ ಕುರಿತು ತಕ್ಷಣವೇ ಸರ್ಕಾರದ ಗಮನಕ್ಕೆ ತನ್ನಿರಿ’ ಎಂದು ಪ್ರತಿಭಟನಾಕಾರರು ಹೇಳಿದರು.
ಹೆದ್ದಾರಿ ತಡೆಯಿಂದಾಗಿ ಚಿಂಚೋಳಿ -ಕಲಬುರಗಿ ನಡುವಿನ ಬಸ್ ಸಂಚಾರ ಮಾರ್ಗ 5 ತಾಸು ಬದಲಾಗಿತ್ತು. ಕಬ್ಬಿನ ಲಾರಿಗಳು ಸೇರಿದಂತೆ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ಸಾಲುಗಟ್ಟಿ ನಿಂತಿದವು. ಪ್ರಯಾಣಿಕರು ಪರದಾಡಿದರು. ಸುಲೇಪೇಟ ಪಿಎಸ್ಐ ಅಮರ್, ರಟಕಲ್ ಪಿಎಸ್ಐ ಶೀಲಾದೇವಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಗಡಿಕೇಶ್ವಾರ, ರಾಯಕೋಡ, ಭೂತಪೂರ, ಚಿಂತಪಳ್ಳಿ, ರುದ್ನೂರ, ಚಿಂತಪಳ್ಳಿ ತಾಂಡಾ, ಬೆನಕನಳ್ಳಿ, ಭಂಟನಳ್ಳಿ, ತೇಗಲತಿಪ್ಪಿ, ಹಲಚೇರಾ, ಕೆರಳ್ಳಿ ಗ್ರಾಮಸ್ಥರು ಸೇರಿ ಮತ್ತಿತರರು
ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.