ADVERTISEMENT

ಮೆಗಾ ಜವಳಿ ಪಾರ್ಕ್‌ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:15 IST
Last Updated 22 ಅಕ್ಟೋಬರ್ 2021, 7:15 IST
ಮೆಗಾ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಗುರುತಿಸಿದ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್‌ ಹೊರವಲಯದ ಜಮೀನನ್ನು ಸಂಸದ ಡಾ.ಉಮೇಶ ಜಾಧವ ಬುಧವಾರ ಪರಿಶೀಲಿಸಿದರು
ಮೆಗಾ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಗುರುತಿಸಿದ ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್‌ ಹೊರವಲಯದ ಜಮೀನನ್ನು ಸಂಸದ ಡಾ.ಉಮೇಶ ಜಾಧವ ಬುಧವಾರ ಪರಿಶೀಲಿಸಿದರು   

ಕಲಬುರಗಿ: ಕಲಬುರಗಿಯಲ್ಲಿ ‘ಮೆಗಾ ಜವಳಿ ಪಾರ್ಕ್‌’ ಸ್ಥಾಪಿಸಲು ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಶೀಘ್ರ ಮಂಜೂರಾತಿ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ‍ಪ್ರಸ್ತಾವ ಸಲ್ಲಿಸಿದ್ದಾರೆ.

ಅಕ್ಟೋಬರ್‌ 13ರಂದು ಕೇಂದ್ರ ಜವಳಿ ಸಚಿವ ‍ಪಿಯೂಷ್‌ ಗೋಯಲ್‌ ಅವರಿಗೆ ಪ್ರಸ್ತಾವ ಸಲ್ಲಿಸಿರುವ ಬೊಮ್ಮಾಯಿ, ‘ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್, ನದಿಸಿನ್ನೂರ, ಹೊನ್ನಕಿರಣಗಿ ಗ್ರಾಮಗಳ ವ್ಯಾಪ‍್ತಿಯಲ್ಲಿ ಜಮೀನು ಇದೆ. ಇದನ್ನು ಜವಳಿ ಪಾರ್ಕ್‌ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದೇ ಗ್ರಾಮಗಳ ವ್ಯಾಪ್ತಿಯಲ್ಲಿ ಭೀಮಾ ನದಿ ನೀರು ಹರಿಯುವುದರಿಂದ ನೀರಿನ ಸೌಕರ್ಯವೂ ಸುಲಭವಾಗಿ ಸಿಗಲಿದೆ. ವಿದ್ಯುತ್‌ ಪೂರೈಕೆಗೂ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರ ಇಲ್ಲಿ ಪಾರ್ಕ್‌ ಸ್ಥಾಪನೆ ಮಾಡಲು ಉತ್ಸುಕವಾಗಿದೆ’ ಎಂದೂತಿಳಿಸಿದ್ದಾರೆ.

ಕಲಬುರಗಿಯೂ ಸೇರಿದಂತೆ ರಾಜ್ಯದ ಮೂರು ಕಡೆ (ತುಮಕೂರು, ವಿಜಯಪುರ) ಮೆಗಾ ಜವಳಿ ಪಾರ್ಕ್‌ ಮಂಜೂರಾತಿಗೂ ಅವರು ಕೋರಿಕೆ ಇಟ್ಟಿದ್ದಾರೆ.

ADVERTISEMENT

ಇದೇ ಜುಲೈ 24ರಂದು ಕೇಂದ್ರ ಸರ್ಕಾರ ‘ಮೆಗಾ ಜವಳಿ ಪಾರ್ಕ್‌’ ಅನ್ನು ಕಲಬುರಗಿಗೆ ಮಂಜೂರು ಮಾಡುವುದಾಗಿ ಹೇಳಿತ್ತು. ಇದಕ್ಕೆ ಅಗತ್ಯವಿರುವ 1 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜಿಲ್ಲಾಡಳಿತಕ್ಕೆ ನಿರ್ದೇಶನ ಕೂಡ ನೀಡಿದ್ದರು.

‘ಈ ಹಿಂದೆ ಕಲಬುರಗಿಗೆ ಮಂಜೂರಾಗಿದ್ದ ಒಂದು ಜವಳಿ ಪಾರ್ಕ್‌ ಅನ್ನು ಮೈಸೂರಿಗೆ ಸ್ಥಳಾಂತರಿಸಿತ್ತು. ಆದರೆ, ಮೆಗಾ ಪಾರ್ಕ್‌ ಸ್ಥಾಪನೆಗೆ ಸ್ವತಃ ಮುಖ್ಯಮಂತ್ರಿಯವರೇ ರಾಜ್ಯದ ಆಸಕ್ತಿ ತಿಳಿಸಿದ್ದಾರೆ. ಇದಕ್ಕೆ ಬೇಕಾದ ಭೂಮಿಯನ್ನು ಈಗಾಗಲೇ ನಾವು ಪರಿಶೀಲನೆ ಮಾಡಿದ್ದು, ಫಿರೋಜಾಬಾದ್‌ ಸುತ್ತಲಿನ ಪ್ರದೇಶದಲ್ಲಿ 1,515 ಎಕರೆ ಜಮೀನು ಇದೆ. ಕೇಂದ್ರದ ಮೇಲೆ ಒತ್ತಡ ತಂದು ಪಾರ್ಕ್‌ ಕಾಮಗಾರಿಗಳು ಬೇಗ ಆರಂಭವಾಗುವಂತೆ ನೋಡಿಕೊಳ್ಳಲಾಗುವುದು’ ಎಂದು ಸಂಸದ ಡಾ.ಉಮೇಶ ಜಾಧವ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.