
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಅರಳುವ ಮಕ್ಕಳನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳಿ ಅವರ ಭವಿಷ್ಯ ಹಿಸುಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪರಿಣಾಮ ಈ ಭಾಗದ ಮಹಿಳಾ ಸಾಕ್ಷರತಾ ಪ್ರಮಾಣ ಶೇ 54.52ಕ್ಕೆ ಕುಸಿದಿದೆ. ಬಾಣಂತಿಯರ ಹಾಗೂ ನವಜಾತು ಶಿಶುಗಳ ಮರಣ ಪ್ರಮಾಣ ಹೆಚ್ಚುತ್ತಿದೆ.
ಪೋಷಕರ ಈ ತಪ್ಪು ನಿರ್ಧಾರ ಮಕ್ಕಳ ಶಿಕ್ಷಣದ ಹಕ್ಕಿನ ಜೊತೆಗೆ ಜೀವವನ್ನೂ ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೂ ಸಮುದಾಯದ ಸಹಭಾಗಿತ್ವ ಇಲ್ಲದ ಕಾರಣ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ.
2023ರಿಂದ 2025ರ ಅಕ್ಟೋಬರ್ 31ರವರೆಗೂ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 8,355 ದೂರುಗಳನ್ನು ಸ್ವೀಕರಿಸಿದ್ದು, ಇದರಲ್ಲಿ 2,074 ದೂರುಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿವೆ. ಆ ಪೈಕಿ 1,932 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. 142 ಬಾಲ್ಯವಿವಾಹಗಳು ನಡೆದಿದ್ದು, 124 ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಳ್ಳಾರಿ, ಕೊಪ್ಪಳದಲ್ಲಿ ಹೆಚ್ಚು ದೂರು: ಕ್ರಮವಾಗಿ 983 ಹಾಗೂ 986 ಲಿಂಗಾನುಪಾತ ಹೊಂದಿದ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಬಳ್ಳಾರಿಯಲ್ಲಿ 403, ಕೊಪ್ಪಳದಲ್ಲಿ 378 ದೂರುಗಳನ್ನು ಸ್ವೀಕರಿಸಲಾಗಿದೆ. ಬಳ್ಳಾರಿಯಲ್ಲಿ 380 ಹಾಗೂ ಕೊಪ್ಪಳದಲ್ಲಿ 363 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.
ಈ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 332 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. 34 ವಿವಾಹಗಳು ನಡೆದಿದ್ದು, 32 ಪ್ರಕರಣ ದಾಖಲಾಗಿವೆ. ಯಾದಗಿರಿಯಲ್ಲಿ 30, ಬಳ್ಳಾರಿ 23, ರಾಯಚೂರು 20, ಕೊಪ್ಪಳ 15, ವಿಜಯನಗರ 12 ಹಾಗೂ ಬೀದರ್‌ನಲ್ಲಿ ಎಂಟು ವಿವಾಹಗಳು ಜರುಗಿವೆ.
ನಿಶ್ಚಿತಾರ್ಥವೂ ಅಪರಾಧ: ಬಾಲ್ಯವಿವಾಹ ಮಾಡುವ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ‘ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ–2025’ ತಂದಿದೆ. ಅಧಿವೇಶನದಲ್ಲಿ ಇದಕ್ಕೆ ಅಂಗೀಕಾರ ಪಡೆಯಲಾಗಿದೆ. ಇದರಡಿ ಚಿಕ್ಕ ವಯಸ್ಸಿನವರಿಗೆ ನಿಶ್ಚಿತಾರ್ಥ ಮಾಡಿದ್ದು ಸಾಬೀತಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಅಪರಾಧ ಸಾಬೀತಾದರೆ ಗರಿಷ್ಠ 2 ವರ್ಷದವರೆಗೂ ಕಠಿಣ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಲು ಅವಕಾಶ ಇದ್ದು, ನ್ಯಾಯಾಧೀಶರಿಗೆ ಬಾಲ್ಯವಿವಾಹ ಪ್ರಯತ್ನ ತಡೆಯಲು ಅಧಿಕಾರ ನೀಡುತ್ತದೆ.
‘ಸಮುದಾಯದ ಸಹಭಾಗಿತ್ವವೂ ಮುಖ್ಯ’
‘ಬಾಲ್ಯವಿವಾಹದ ದುಷ್ಪರಿಣಾಮಗಳು ಹಾಗೂ ನಿಷೇಧ ಕಾಯ್ದೆಯ ಕುರಿತು ಅರಿವು ಮೂಡಿಸಲು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೂ ಕಾವಲು ಸಮಿತಿಗಳನ್ನು ರಚಿಸಲಾಗಿದೆ. ಪೊಲೀಸ್ ಠಾಣೆ ಮಟ್ಟದಲ್ಲಿಯೂ ಸಮಿತಿಗಳಿವೆ. ಸಮಿತಿಗಳು ನಿಯಮಿತವಾಗಿ ಸಭೆ ಸೇರಬೇಕು. ಬಾಲ್ಯವಿವಾಹ ತಡೆಗೆ ಅಧಿಕಾರಿಗಳ ಜೊತೆಗೆ ಸಮಾಜದ ಸಹಭಾಗಿತ್ವವೂ ಮುಖ್ಯವಾಗುತ್ತದೆ. ತಮ್ಮ ಸುತ್ತಮುತ್ತ ಎಲ್ಲಿಯಾದರೂ ಬಾಲ್ಯವಿವಾಹಗಳು ನಡೆದರೆ ಮಾಹಿತಿ ನೀಡಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಬಾಲ್ಯವಿವಾಹ ದೂರುಗಳ ವಿವರ (2023ರಿಂದ 25ರ ಅಕ್ಟೋಬರ್ ಅಂತ್ಯದವರೆಗೆ)
ಜಿಲ್ಲೆ;ದೂರುಗಳ ಸಂಖ್ಯೆ
ಬಳ್ಳಾರಿ;403
ಬೀದರ್;131
ಕಲಬುರಗಿ;366
ಕೊಪ್ಪಳ;378
ರಾಯಚೂರು;249
ಯಾದಗಿರಿ;327
ವಿಜಯನಗರ;220
ಒಟ್ಟು;2074
ಎಫ್‌ಐಆರ್‌ಗಳ ವಿವರ (2023ರಿಂದ 25ರ ಅಕ್ಟೋಬರ್ ಅಂತ್ಯದವರೆಗೆ)
ಜಿಲ್ಲೆ;ಎಫ್‌ಐಆರ್
ಕಲಬುರಗಿ;32
ಯಾದಗಿರಿ;30
ಕೊಪ್ಪಳ;15
ರಾಯಚೂರು;18
ವಿಜಯನಗರ;12
ಬೀದರ್;8
ಬಳ್ಳಾರಿ;9
ಒಟ್ಟು;124
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.