ADVERTISEMENT

ಚಿಂಚೋಳಿ ಉಪ ಚುನಾವಣೆ ಪ್ರಚಾರ ಚುರುಕು: ಆರೋಪ, ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
   

ಕಲಬುರ್ಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಚುರುಕಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರು ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ.

ಬಿಸಿಲನ್ನೂ ಲೆಕ್ಕಿಸದೆ ಉಭಯ ಪಕ್ಷಗಳ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವರಾದ ರಾಜಶೇಖರ ಪಾಟೀಲ, ರಹೀಂಖಾನ್, ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಡಾ.ಉಮೇಶ ಜಾಧವ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ADVERTISEMENT

ಇನ್ನು ಚಿಂಚೋಳಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕ ವಿ.ಸೋಮಣ್ಣ ಹಾಗೂ 
ಸ್ಥಳೀಯ ಮುಖಂಡರು ತಮ್ಮ ಅಭ್ಯರ್ಥಿ ಡಾ.ಅವಿನಾಶ ಜಾಧವ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ರಟಕಲ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ಮಲ್ಲಿಕಾರ್ಜುನ ಖರ್ಗೆ, ‘ಮುಂಬಯಿಯಿಂದ ಬರುವಾಗ ಕೈಯಲ್ಲಿ ಕಮಲ ಹಿಡಿದುಕೊಂಡೇ ಬಂದ (ಡಾ.ಉಮೇಶ ಜಾಧವ) ಮಾರಾಯ. ಇಲ್ಲಿ ಬರೋತನಕ ಅದು ಬಾಡೇ ಹೋಯ್ತು’ ಎಂದು ಕುಟುಕಿದರು.

ಚಂದನಕೇರಾದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ‘ಈ ಚುನಾವಣೆ ಮಹತ್ವದ ಚುನಾವಣೆ. ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯ ಬೇಕಾದರೆ ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಗಳನ್ನು ಗೆಲ್ಲಲೇಬೇಕು’ ಎಂದು ಮನವಿ ಮಾಡಿದರು.

ಬೀದರ್ ಸಂಸದ ಭಗವಂತ ಖೂಬಾ ಮಾತನಾಡಿ, ‘ಸುಭಾಷ ರಾಠೋಡ ಬದಲಿಸದ ಪಕ್ಷವಿಲ್ಲ. ಅವರೊಬ್ಬ ಪಕ್ಷಾಂತರಿ’ ಎಂದು ಗೇಲಿ ಮಾಡಿದರು.

ಶಾಸಕ ವಿ.ಸೋಮಣ್ಣ, ‘ಕಾಂಗ್ರೆಸ್‌ನವರು ಜೆಡಿಎಸ್‌ಗೆ ಮಾರಾಟವಾಗಿದ್ದಾರೆ ಎಂದರೆ ಒಪ್ಪಿಕೊಳ್ಳುತ್ತಾರಾ?’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.