ADVERTISEMENT

ಚಿಂಚೋಳಿ: ದೊಡ್ಡ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮೀನಮೇಷ

ಜಗನ್ನಾಥ ಡಿ.ಶೇರಿಕಾರ
Published 24 ನವೆಂಬರ್ 2025, 6:52 IST
Last Updated 24 ನವೆಂಬರ್ 2025, 6:52 IST
ಚಿಂಚೋಳಿ ತಾಲ್ಲೂಕಿನ ಬಾವನಗುಡಿ ತಾಂಡಾದ ಬ್ರಿಜ್ ಕಂ ಬ್ಯಾರೇಜಿಗೆ ಗೇಟ್‌ ಅಳವಡಿಸಿದ್ದರಿಂದ ನೀರಿನಿಂದ ಬ್ಯಾರೇಜ್‌ ತುಂಬಿರುವುದು
ಚಿಂಚೋಳಿ ತಾಲ್ಲೂಕಿನ ಬಾವನಗುಡಿ ತಾಂಡಾದ ಬ್ರಿಜ್ ಕಂ ಬ್ಯಾರೇಜಿಗೆ ಗೇಟ್‌ ಅಳವಡಿಸಿದ್ದರಿಂದ ನೀರಿನಿಂದ ಬ್ಯಾರೇಜ್‌ ತುಂಬಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಬ್ರಿಜ್ ಕಂ ಬ್ಯಾರೇಜ್‌ಗಳಿಗೆ ಇನ್ನೂ ಗೇಟ್‌ ಅಳವಡಿಸಿಲ್ಲ. ಇದರಿಂದ ಮುಲ್ಲಾಮಾರಿ ನದಿಯ ನೀರು ಪೋಲಾಗುತ್ತಿದೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 43 ಬ್ರಿಜ್ ಕಂ ಬ್ಯಾರೇಜ್ ಹಾಗೂ ಅಣೆಕಟ್ಟೆಗಳಿವೆ. ಇದರಲ್ಲಿ ಸಣ್ಣ ತೊರೆ ನಾಲಾಗಳಿಗೆ ನಿರ್ಮಿಸಿದ ಬ್ಯಾರೇಜ್‌ಗಳಿಗೆ ಗೇಟ್‌ಗಳನ್ನು ಹಾಕಲಾಗಿದೆ. ಆದರೆ ದೊಡ್ಡ ಬ್ಯಾರೇಜ್‌ಗಳಿಗೆ ಗೇಟ್‌ಗಳನ್ನು ಅಳವಡಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಣ್ಣ ಬ್ಯಾರೇಜ್‌ಗಳಿಗೆ ಅಧಿಕಾರಿಗಳೇ ಗೇಟ್‌ ಅಳವಡಿಸಿದ್ದರಿಂದ ಬ್ಯಾರೇಜ್‌ಗಳು ನೀರಿನಿಂದ ತುಂಬಿದ್ದರೆ, ದೊಡ್ಡ ಬ್ಯಾರೇಜ್‌ಗಳು ನೀರಿಲ್ಲದೇ ಭಣಗುಡುವಂತಾಗಿದೆ.

ADVERTISEMENT

ತಾಲ್ಲೂಕಿನ ಜನರ ಜೀವನಾಡಿ ಎನಿಸಿದ ಮುಲ್ಲಾಮಾರಿ ನದಿಗೆ ಸುಮಾರು 14 ಬ್ರಿಜ್ ಕಂ ಬ್ಯಾರೇಜ್‌ಗಳಿದ್ದು ಇವುಗಳಲ್ಲಿ ಎರಡು ಬ್ಯಾರೇಜ್‌ಗಳು ಕರ್ನಾಟಕ ಜಲ ಭಾಗ್ಯ ನಿಗಮದ ವ್ಯಾಪ್ತಿಯಲ್ಲಿವೆ. ಉಳಿದ 12 ಬ್ಯಾರೇಜ್‌ಗಳು ಸಣ್ಣ ನೀರಾವರಿ ಉಪ ವಿಭಾಗ ವ್ಯಾಪ್ತಿಯಲ್ಲಿದ್ದು ಇವುಗಳಿಗೆ ಗೇಟ್‌ ಅಳವಡಿಸುವುದು ಬಾಕಿಯಿದೆ. ಇದರಿಂದ ಮುಲ್ಲಾಮಾರಿ ನದಿಯಲ್ಲಿ ನೀರು ಹರಿದು ವ್ಯರ್ಥವಾಗಿದೆ.

ಮಳೆಗಾಲ ಮುಗಿದು ಅಕ್ಟೋಬರ್‌ ತಿಂಗಳಲ್ಲಿ ಗೇಟ್‌ ಅಳವಡಿಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ದೊಡ್ಡ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸಿಲ್ಲ. ಇದಕ್ಕೆ ಇಲಾಖೆ ಟೆಂಡರ್ ಕರೆಯದಿರುವುದು ಕಾರಣ ಎಂಬ ಆರೋಪ ಕೇಳಿಬಂದಿದೆ.

‘ಸಣ್ಣ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸಿ ನೀರು ಸಂಗ್ರಹಿಸಿದ್ದರಿಂದ ಅಂತರ್ಜಲಮಟ್ಟ ವೃದ್ಧಿಯಾಗುವುದರ ಜೊತೆಗೆ ತೊಗರಿ ಮತ್ತು ಜೋಳದ ಬೆಳೆಗೆ ರೈತರು ಕೊಳವೆ ಮೂಲಕ ನೀರು ಹರಿಸಿಕೊಳ್ಳಲು ಸಹಕಾರಿಯಾಗಿದೆ. ಬ್ಯಾರೇಜ್‌ಗಳ ನೀರು ಜಾನುವಾರುಗಳಿಗೆ ಕುಡಿಯಲು ಮತ್ತು ತೊಗರಿ ಬೆಳೆ ನಿರ್ವಹಣೆಗೆ ಕೀಟನಾಶಕ ಸಿಂಪಡಣೆಗೆ ನೀರು ಪಡೆದುಕೊಳ್ಳುತ್ತಿದ್ದಾರೆ’ ಎಂದು ತಾ.ಪಂ ಮಾಜಿ ಸದಸ್ಯ ಪ್ರೇಮಸಿಂಗ್ ಜಾಧವ ತಿಳಿಸಿದ್ದಾರೆ.

ದೊಡ್ಡ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಫತ್ತುನಾಯಕ ತಾಂಡಾದ ಬ್ಯಾರೇಜಿಗೆ ಗೇಟ್‌ ಹಾಕುವ ಕೆಲಸ ಪ್ರಗತಿಯಲ್ಲಿದೆ. ಎಲ್ಲಾ ಬ್ಯಾರೇಜ್‌ಗಳಿಗೂ ಗೇಟ್‌ ಅಳವಡಿಸಲಾಗುವುದು
ಶಿವಾಜಿ ಜಾಧವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಉಪ ವಿಭಾಗ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.