
ಚಿಂಚೋಳಿ: ಹೊಲಕ್ಕೆ ಹೋಗಿ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ ಭಾನುವಾರ ನಡೆದಿದೆ.
ದೋಟಿಕೊಳ ಗ್ರಾಮದ ಶರಣು ಗುಂಡಪ್ಪ ಭೋಸಗಿ(25) ಮೃತ ವ್ಯಕ್ತಿ. ಕಡಲೆ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದು, ಮನೆಗೆ ಮರಳಿರಲಿಲ್ಲ. ಇದರಿಂದ ಸಂಶಯಗೊಂಡು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಯುವಕ ಕಣ್ಮರೆಯಾದ ಕುರಿತು ದೂರು ದಾಖಲಾಗಿತ್ತು ಎಂದು ಎಸ್‌ಐ ಗಂಗಮ್ಮ ಜಿನಿಕೇರಿ ತಿಳಿಸಿದರು.
ಬೆನ್ನಲ್ಲಿಯೇ ದೋಟಿಕೊಳ ಗ್ರಾಮದ ಸಣ್ಣ ನೀರಾವರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತನ ಕಾಲಿಗೆ ಹಗ್ಗ ಬಿಗಿಯಲಾಗಿದೆ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿಗೆ ಕೊಂಡೊಯ್ಯಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತನು, ಗ್ರಾಮದ ರೈತರೊಬ್ಬರ ಬಳಿ ಕೃಷಿಯ ಮೇಲ್ವಿಚಾರಕನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ ಮತ್ತು ಚಿಂಚೋಳಿ ಎಸ್‌ಐ ಗಂಗಮ್ಮ ಜಿನಿಕೇರಿ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.