ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯದ ನೀರು ನದಿಗೆ ಬಿಟ್ಟಿದ್ದರಿಂದ ಸೇತುವೆಯಲ್ಲಿ ನೀರಿನ ಭೋರ್ಗರೆತ
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ.
ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2500 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಸಧ್ಯ ಜಲಾಶಯದ ಒಳ ಹರಿವು 1750 ಕ್ಯೂಸೆಕ್ ಇದೆ. ಜಲಾಶಯ ಇಂದಿನ ನೀರಿನ ಮಟ್ಟ 490.15 ಮೀಟರ್ ಇರುತ್ತದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮೃತ ಪವಾರ ತಿಳಿಸಿದರು.
ತಾಲ್ಲೂಕಿನ ಮತ್ತೊಂದು ಪ್ರಮುಖವಾದ ಚಂದ್ರಂಪಳ್ಳಿ ಜಲಾಶಯಕ್ಕೆ ಸುಮಾರು 2000ಕ್ಕೂ ಅಧಿಕ ಕ್ಯೂಸೆಕ್ ಒಳ ಹರಿವಿದ್ದು 2200 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಜಲಾಶಯದ ಇಂದಿನ ನೀರಿನಮಟ್ಟ 1614 ಅಡಿ ಇರುತ್ತದೆ. ಕಳೆದ 12 ಗಂಟೆಗಳಲ್ಲಿ ಜಲಾಶಯಕ್ಕೆ 3ರಿಂದ 4 ಅಡಿ ನೀರುಹರಿದು ಬಂದಿದೆ ಎಂದು ಯೋಜನಾಧಿಕಾರಿ ಚೇತನ ಕಳಸ್ಕರ ಮಾಹಿತಿ ನೀಡಿದರು.
ಎರಡೂ ಜಲಾಶಯಗಳಿಂದ ನೀರು ನದಿಗೆ ಬಿಟ್ಟಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಉಂಟಾಗಲಿದೆ ಜತೆಗೆ ಚಿಂಚೋಳಿ ಕೆಳಭಾಗದ ಮುಲ್ಲಾಮಾರಿನದಿ ಪಾತ್ರದ ಕೆಲವು ಹಳ್ಳಿಗಳ ಸಂಪರ್ಕ ಸೇತುವೆ ಮುಳುಗುವ ಸಾಧ್ಯತೆಯಿದೆ.
ತಾಲ್ಲೂಕಿನ ಕುಂಚಾವರಂ 80.4, ಚಿಂಚೋಳಿ 22.4,ಐನಾಪುರ 25.5,ಸುಲೇಪೇಟ 22.4, ಚಿಮ್ಮನಚೋಡ 31, ಕೋಡ್ಲಿ 18, ನೀಡಗುಂದಾ 7 ಮಿ. ಮೀಟರ್ ಮಳೆಯಾಗಿದೆ.
ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.