ಚಿಂಚೋಳಿ: ‘ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಈವರೆಗೆ 25 ಮನೆಗಳಿಗೆ ಹಾನಿಯಾಗಿದೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.
‘ಮುಂಗಾರು ಪೂರ್ವ ಮಳೆಯಿಂದ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದರೆ ಮುಂಗಾರು ಆರಂಭವಾದ ಮೇಲೆ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಮನೆಗಳ ಭಾಗಶಃ ಗೋಡೆ ಉರುಳಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಕಳೆದ ಎರಡು ದಿನಗಳಲ್ಲಿಯೇ 8ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ಅಧಿಕಾರಿಗಳಿಂದ ಪಡೆದು ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದರು.
‘ಮಳೆಯಿಂದ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿರುವ, ಬೆಳೆ ಹಾನಿ ವರದಿಗಳು ಬಂದಿಲ್ಲ’ ಎಂದು ತಿಳಿಸಿದ್ದಾರೆ.
‘ತಾಲ್ಲೂಕಿನ ಬೆನಕನಳ್ಳಿ ಒಂದೇ ಊರಿನಲ್ಲಿ 4 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಮಳೆ ಹೀಗೆ ಮುಂದುವರಿದರೆ ಇನ್ನಷ್ಟು ಹಾನಿಯಾಗುವ ಆತಂಕವಿದೆ. ಹಾನಿಯಾದ ಮನೆಗಳ ಮಾಲೀಕರಿಗೆ ತುರ್ತಾಗಿ ಪರಿಹಾರ ನೀಡಬೇಕು, ಇದರಿಂದ ತ್ವರಿತವಾಗಿ ದುರಸ್ತಿ ಮಾಡಿಕೊಂಡು ಮುಂದಾಗುವ ಹಾನಿ ತಪ್ಪಿಸಲು ಸಾಧ್ಯ’ ಎಂದು ಯುವ ಮುಖಂಡ ಮಲ್ಲು ರಾಯಪ್ಪಗೌಡ ತಿಳಿಸಿದ್ದಾರೆ.
ಮಳೆ ವಿವರ: ಬುಧವಾರ ಬೆಳಿಗ್ಗೆ 8.30ರ ವರೆಗೆ 24 ಗಂಟೆಯಲ್ಲಿ ಸುಲೇಪೇಟ 65.5 ಮಿ.ಮೀ, ಕುಂಚಾವರ 50.4, ಚಿಂಚೋಳಿ 33.6, ಚಿಮ್ಮನಚೋಡ 28, ನಿಡಗುಂದಾ 23 ಹಾಗೂ ಕೋಡ್ಲಿ 10.6 ಮಿ.ಮೀ ಮಳೆಯಾಗಿದೆ ಎಂದು ಜಲ ಹವಾ ಮಾಪನ ಕೇಂದ್ರದ ಮಳೆ ವರದಿಗಾರ ಶ್ರೀಮಂತ ದುಕಾನದಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.