ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ನೀರಿನಿಂದ ಭರ್ತಿಯಾಗಿದೆ. ಆದರೆ ಇದರ ಕೆಳಭಾಗದಲ್ಲಿ ಜನ ಜಾನುವಾರುಗಳು ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.
ಬೇಸಿಗೆ ಪ್ರಖರ ಬಿಸಿಲಿನ ತಾಪಕ್ಕೆ ಅಂತರ್ಜಲ ಕುಸಿತ ಒಂದೆಡೆಯಾದರೆ, ನೀರಿನ ಮೂಲವಾಗಿರುವ ಹಾಗೂ ತಾಲ್ಲೂಕಿನ ರೈತರ ಜೀವನಾಡಿ ಎನಿಸಿದ ಮುಲ್ಲಾಮಾರಿ ನದಿ ಬತ್ತತೊಡಗಿದೆ. ಇದರ ನೇರ ಪರಿಣಾಮ ಚಿಮ್ಮನಚೋಡ ಹಾಗೂ ತಾಜಲಾಪುರ ಗ್ರಾಮಗಳ ಜನರ ಮೇಲಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಮೊಗಡಂಪಳ್ಳಿ ತಿಳಿಸಿದ್ದಾರೆ.
ಸದ್ಯ ಚಿಮ್ಮನಚೋಡ ಸುತ್ತಲೂ ನದಿಯಲ್ಲಿ ನೀರಿಲ್ಲ. ನದಿ ಒಣಗಿದೆ. ಅಲ್ಲಲ್ಲಿ ಇರುವ ನೀರಿನಲ್ಲಿ ಪಾಚಿ ಬೆಳೆದು ನೀರು ಬಳಕೆಗೆ ಬಾರದಂತಾಗಿದೆ. ಜತೆಗೆ ಜಾನುವಾರು ದುರ್ವಾಸನೆಯಿಂದಾಗಿ ನೀರು ಕುಡಿಯುತ್ತಿಲ್ಲ. ಒಂದೊಮ್ಮೆ ಈ ನೀರು ಕುಡಿದರೆ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ನದಿ ಪಾತ್ರದ ಕನಕಪುರ, ಗೌಡನಹಳ್ಳಿ, ನೀಮಾಹೊಸಳ್ಳಿ ಚಂದಾಪುರ, ಪೋಲಕಪಳ್ಳಿ, ಅಣವಾರ, ಗರಗಪಳ್ಳಿ, ಬುರುಗಪಳ್ಳಿ, ಜಟ್ಟೂರು ಬಳಿ ಬ್ರಿಡ್ಜ್ ಕಂ ಬ್ಯಾರೇಜು ನಿರ್ಮಿಸಲಾಗಿದೆ. ಇವುಗಳಲ್ಲಿ ನೀರು ಸಾಕಷ್ಟು ಸಂಗ್ರಹವಿದೆ. ಇದರಿಂದ ನದಿ ಪಾತ್ರದಲ್ಲಿ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಚಿಮ್ಮನಚೋಡ ಮತ್ತು ನಾಗರಾಳ, ತಾಜಲಾಪುರ ಗ್ರಾಮಗಳ ಜನರು ನೀರಿನ ಸಮಸ್ಯೆಯಿಂದ ಬಸವಳಿದಿದ್ದಾರೆ. ಹೀಗಾಗಿ ಜಲಾಶಯದಿಂದ ನದಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಶಿವಕುಮಾರ ಹಿರೇಮಠ ಮತ್ತು ಸಂತೋಷ ಗೌನಳ್ಳಿ ಒತ್ತಾಯಿಸಿದ್ದಾರೆ.
‘ಬೇಸಿಗೆ ಇರುವುದರಿಂದ ನೀರು ಬಿಡಲು ಜಿಲ್ಲಾಧಿಕಾರಿಗಳಿಂದ ಅನುಮತಿ ಅಗತ್ಯವಿರುತ್ತದೆ. ನಾನು ಈಗಾಗಲೇ ನೀರಾವರಿ ಇಲಾಖೆಯ ಮೇಲಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಪತ್ರ ಬರೆದಿದ್ದೇನೆ’ ಎಂದು ಯೋಜನೆಯ ಎಇಇ ಅಮೃತ ಪವಾರ್ ತಿಳಿಸಿದ್ದಾರೆ.
ಚಿಮ್ಮನಚೋಡ ಸುತ್ತಲೂ ಪಾಚಿ ಬೆಳೆದು ದುರ್ನಾತ ಬೀರುತ್ತಿದೆ. ಬಟ್ಟೆ ತೊಳೆಯಲೂ ನೀರು ಬಾರದಂತಾಗಿದ್ದು ಜಾನುವಾರು ನೀರು ಸೇವಿಸುತ್ತಿಲ್ಲ. ಹೀಗಾಗಿ ಜಲಾಶಯದಿಂದ ನೀರು ಬಿಟ್ಟು ರೈತರಿಗೆ ನೆರವಾಗಬೇಕುಬಂಡಾರೆಡ್ಡಿ ಆಡಕಿ ಚಿಮ್ಮನಚೋಡ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.