ಚಿತ್ತಾಪುರ: ‘ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೆ.17 ರಂದು ಸ್ವಾತಂತ್ರ್ಯ ಲಭಿಸಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಸರ್ಕಾರದ ಶಿಷ್ಟಾಚಾರದಂತೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ನಿಮಿತ್ತ ಪ್ರಜಾ ಸೌಧದ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಎಲ್ಲ ಮಹಾನ್ ಪುರುಷರ ಪುತ್ಥಳಿಗಳಿ ಮತ್ತು ಸರ್ಕಾರಿ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದು ಕಡ್ಡಾಯ’ ಎಂದು ಅವರು ಸೂಚಿಸಿದರು.
‘ಬೆಳ್ಳಿಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. 30 ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತಮ ಸಿಬ್ಬಂದಿಯನ್ನು ಗುರುತಿಸಿ ಸೇವಾ ಪುರಷ್ಕಾರ ಪ್ರಶಸ್ತಿ ಪ್ರದಾನ ಮತ್ತು ಅತೀ ಹೆಚ್ಚು ಅಂಕ ಪಡೆದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು’ ಎಂದು ತಿಳಿಸಿದರು.
‘ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಸರ್ಕಾರದ ಶಿಷ್ಟಾಚಾರ ಉಲ್ಲಂಘನೆಯಾಗದಂತೆ, ಎಲ್ಲಾ ಕಚೇರಿಗಳಲ್ಲಿ ವಿಶ್ವಕರ್ಮರ ಭಾವಚಿತ್ರದ ಪೂಜೆ ಮಾಡುವುದು ಕಡ್ಡಾಯ’ ಎಂದರು
‘ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಪಹ್ಲಾದ್ ವಿಶ್ವಕರ್ಮ ಅವರು ಮಾತನಾಡಿ, ಕಳೆದ ವರ್ಷದಂತೆ ಈ ವರ್ಷ ಲೋಪದೋಷಗಳಾಗಬಾರದು. ಉಪನ್ಯಾಸಕರು, ಸ್ವಾಮೀಜಿಗಳ ಮತ್ತು ಸಮಾಜದ ಅಧ್ಯಕ್ಷರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕು’ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಮದ್ ಅಕ್ರಂ ಪಾಷಾ, ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ, ಮುಖಂಡರಾದ ಉದ್ಯಕುಮಾರ ಸಾಗರ, ಕಾಶಿಪತಿ ಬಡಿಗೇರ, ಸುರೇಶ ಭಕ್ತಿ, ಶಂಭು ವಿಶ್ವಕರ್ಮ, ಮನೋಹರ ಬೆನಕನಳ್ಳಿ, ಪ್ರಕಾಶ, ಶಿವುಕುಮಾರ, ರಾಮಚಂದ್ರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.