ADVERTISEMENT

ಚಿತ್ತಾಪುರ | 'ಚೌಡಯ್ಯ ಮೂರ್ತಿ ಭಗ್ನ; ಕೋಲಿ ಸಮಾಜಕ್ಕೆ ಪೆಟ್ಟು'

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಿಂಚನಸೂರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:15 IST
Last Updated 11 ಅಕ್ಟೋಬರ್ 2025, 5:15 IST
ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿನ ಭಗ್ನಗೊಂಡ ಮೂರ್ತಿ ಸ್ಥಳಕ್ಕೆ ಬಿಗರ ಚೌಡಯ್ಯ ಅಭಿವೃದ್ಧಿ ನಿಗದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭೇಟಿ ನೀಡಿ ಪರಿಶಿಲಿಸಿದರು
ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿನ ಭಗ್ನಗೊಂಡ ಮೂರ್ತಿ ಸ್ಥಳಕ್ಕೆ ಬಿಗರ ಚೌಡಯ್ಯ ಅಭಿವೃದ್ಧಿ ನಿಗದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭೇಟಿ ನೀಡಿ ಪರಿಶಿಲಿಸಿದರು   

ಚಿತ್ತಾಪುರ: ‘ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಕೋಲಿ, ಕಬ್ಬಲಿಗ ಸಮಾಜದ ಕುಲಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ್ದು ರಾಜ್ಯದ ಇಡೀ ಕೋಲಿ ಸಮಾಜದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸಂಜೆ ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿ, ಕಿಡಿಗೇಡಿಗಳು ಭಗ್ನಗೊಳಿಸಿರುವ ಅಂಬಿಗರ ಚೌಡಯ್ಯನವರ ಮೂರ್ತಿ ಪರಿಶೀಲಿಸಿ ಮಾತನಾಡಿದ ಅವರು, ‘ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು ಯಾರೇ ಇರಲಿ ಎರಡು ದಿನದೊಳಗೆ ಪತ್ತೆ ಹಚ್ಚಿ ಬಂಧಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ವಿಷಯ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮಾತನಾಡಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರ ಬಂಧನಕ್ಕೆ ಒತ್ತಾಯಿಸುತ್ತೇನೆ. ಐಜಿಪಿ, ಎಸ್.ಪಿ, ಡಿವೈಎಸ್‌ಪಿ ಅವರು ಕೋಲಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಪತ್ತೆ ಹಚ್ಚಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಭಗ್ನಗೊಂಡಿರುವ ಅಂಬಿಗರ ಚೌಡಯ್ಯನವರ ಮೂರ್ತಿಯ ಸ್ಥಾನದಲ್ಲಿ ಹೊಸದಾಗಿ ಮೂರ್ತಿ ಮಾಡಿಸಿ ಮರುಸ್ಥಾಪಿಸಲು ತಗಲುವ ಸಂಪೂರ್ಣ ವೆಚ್ಚವನ್ನು ಉದ್ಯಮಿ ಅಮರೇಶ್ವರಿ ಚಿಂಚನಸೂರ ಅವರು ನೀಡಲಿದ್ದಾರೆ. ಬರುವ ಜಯಂತಿಯಂದೇ ಮೂರ್ತಿ ಸ್ಥಾಪನೆ ಮಾಡಲು ಗ್ರಾಮದ ಕೋಲಿ, ಕಬ್ಬಲಿಗ ಸಮಾಜದ ಮುಖಂಡರು ಸಭೆ ನಡೆಸಿ ಮುಂದಾಗಬೇಕು’ ಎಂದು ಹೇಳಿದರು.

ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ಸಾಲಿ, ಶಹಾಬಾದ್ ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಮುತ್ತಗಾ ಗ್ರಾಮದ ಅಧ್ಯಕ್ಷ ಶಿವರಾಜ ನಾಟೀಕಾರ, ಮುಖಂಡರಾದ ಬಸವರಾಜ ಜಿರಕಲ್, ವಿಜಯಕುಮಾರ ನಾಟಿಕಾರ, ಸುಧಾಕರ ರಾಮಗುಂಡ, ದ್ಯಾವಣ್ಣಾ ಹಳ್ಳಿ, ರಾಹುಲ್ ಜಿರಕಲ್, ಮಲ್ಲೇಶಿ ಜಿರಕಲ್, ಮಂಜು ವಾಲಿಕಾರ ಶಂಕರವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.