Crop damage is a financial blow to farmers
ಚಿತ್ತಾಪುರ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಹೆಸರು ಬೆಳೆ ಹಾನಿಯಾಗುತ್ತಿದೆ. ಮರು ಬಿತ್ತನೆ ಮಾಡಿದ ತೊಗರಿ, ಉದ್ದು ಬೆಳೆಯೂ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಇದರಿಂದ ರೈತರು ಆರ್ಥಿಕ ಹೊಡೆತಕ್ಕೆ ಸಿಲುಕಿದ್ದಾರೆ.
‘ಕಟಾವಿಗೆ ಬಂದಿದ್ದ ಹೆಸರು ಸತತ ಮಳೆಯಿಂದಾಗಿ ಮೊಳಕೆಯೊಡೆಯುತ್ತಿದೆ. ಜಮೀನು ಕೆಸರು ಗದ್ದೆಯಾಗಿದ್ದು ಗಿಡದಲ್ಲಿನ ಕಾಯಿ ಬಿಡಿಸಲಾಗುತ್ತಿಲ್ಲ. ರಾಶಿ ಯಂತ್ರಗಳು ಹೊಲಕ್ಕೆ ಬರುತ್ತಿಲ್ಲ. ತೇವಾಂಶ ಕಡಿಮೆಯಾಗಲು ಇನ್ನು ಮುರ್ನಾಲ್ಕು ದಿನ ಬೇಕಾಗುತ್ತವೆ. ಅಷ್ಟರಲ್ಲಿ ಹೆಸರು ಸಂಪೂರ್ಣ ಹಾನಿಯಾಗುತ್ತದೆ’ ಎನ್ನುತ್ತಾರೆ ಮುಡಬೂಳ ಗ್ರಾಮದ ರೈತ ಲಾಲಸಾಬ್ ಒಂಟಿ
‘30 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇವೆ. ರಾಶಿ ಮಾಡಬೇಕಿದ್ದ ದಿನಗಳಲ್ಲಿ ಮಳೆ ಶುರುವಾಗಿದ್ದು, ಹೆಸರು ಕಾಳು ಗಿಡದಲ್ಲಿಯೆ ಕಾಳು ಮೊಳಕೆಯಾಗುತ್ತಿದೆ. ರಾಶಿ ಮಾಡಿದ್ದರೆ ₹8–10 ಲಕ್ಷ ಆದಾಯ ಕೈ ಸೇರುತ್ತಿತ್ತು. ಆದರೆ ನಮ್ಮ ದುರಾದೃಷ್ಟ. ಜತೆಗೆ 20ಎಕರೆಯಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ಯಾರನ್ನು ದೂರುವ ಸ್ಥಿತಿಯಿಲ್ಲ’ ಎಂದು ಹೊಸೂರು ಗ್ರಾಮದ ರೈತ ರಾಮಲಿಂಗ ಬಾನರ ಪ್ರಜಾವಾಣಿಗೆ ಅಳಲು ತೋಡಿಕೊಂಡರು.
‘ಬೆಳೆಹಾನಿ ನೋಡಿ ಕರುಳು ಕಿತ್ತು ಬರುವಂತ್ತಾಗಿದೆ. ಉತ್ತಿಬಿತ್ತಿ ಬೆಳೆದ ಬೆಳೆ ಕಣ್ಣಮುಂದೆ ಹಾನಿಯಾಗುವುದು ಮರುಗುವುದಾಗಿದೆ. ಮಳೆ ನಿಂತರೆ ಹೊಲಗಳಲ್ಲಿ ಕಟಾವಿಗೆ ಸಿದ್ದವಾದ ಹೆಸರು ರಾಶಿ ಮಾಡಿ, ಅಲ್ಪಸ್ವಲ್ಪ ಆದಾಯ ಪಡೆಯಬಹುದು’ ಎನ್ನುತ್ತಾರೆ ರೈತರು.
ತುಂಬಿದ ಕಾಗಿಣಾ ನದಿ: ಸತತ ಮಳೆಯಿಂದ ತಾಲ್ಲೂಕಿನಾದ್ಯಂತ ಹಳ್ಳ–ಕೊಳ್ಳಗಳಲ್ಲಿ ಪ್ರವಾಹ ತುಂಬಿ ಹರಿಯುತ್ತಿವೆ. ಜಿಲ್ಲೆಯ ವಿವಿಧ ಜಲಾಶಯಗಳಿಂದ ಹೊರ ಬಿಟ್ಟ ನೀರಿನಿಂದ ಕಾಗಿಣಾ ನದಿಯು ಪ್ರವಾಹದಿಂದ ಮೈದುಂಬಿ ಭೋರ್ಗರೆಯುತ್ತಿದೆ. ತಾಲ್ಲೂಕಿನ ದಂಡೋತಿ ಸಮೀಪದ ಸೇತುವೆಗೆ ಸಮಾನ ಕಾಗಿಣಾ ನದಿ ನೀರು ಹರಿಯುತ್ತಿದ್ದು, ಮತ್ತೆ ಸೇತುವೆ ಮುಳುಗಡೆಯ ಆತಂಕ ಎದುರಾಗಿದೆ.
12 ಮನೆಗಳಿಗೆ ಹಾನಿ: ನಿರಂತರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಆಗಸ್ಟ್ ತಿಂಗಳಿನಲ್ಲಿಯೇ 12 ಮನೆಗಳು ಬಿದ್ದಿವೆ. ಬಿದ್ದ 6 ಮನೆಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನುಳಿದ ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಮಳೆಯಿಂದ ಯಾವುದೇ ಜೀವ ಹಾನಿ, ಪ್ರಾಣಿಗಳ ಹಾನಿಯಾಗಿಲ್ಲ. ಬೆಳೆಹಾನಿ ಸಮೀಕ್ಷೆಯ ನಂತರ ಎಷ್ಟು ಹಾನಿಯಾಗಿದೆ ಎನ್ನುವ ನಿಖರ ಮಾಹಿತಿ ಲಭಿಸುತ್ತದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.