ADVERTISEMENT

ಕಲಬುರಗಿ: ‘ಪಥಸಂಚಲನ’ದ ಮೂಲಕ ‘ಶಕ್ತಿ’ ಪ್ರದರ್ಶಿಸಲು ಪೈಪೋಟಿ

ಪಥಸಂಚಲನ–ಪ್ರತಿಭಟನೆಗೆ ಅನುಮತಿ ಕೋರಿ ಮತ್ತೆ ನಾಲ್ಕು ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 17:10 IST
Last Updated 23 ಅಕ್ಟೋಬರ್ 2025, 17:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ‘ಪಥಸಂಚಲನ’ದ ಮೂಲಕ ‘ಶಕ್ತಿ’ ಪ್ರದರ್ಶಿಸಲು ಪೈಪೋಟಿ ಹೆಚ್ಚುತ್ತಿದ್ದು, ನವೆಂಬರ್‌ 2ರಂದು ಪಥಸಂಚಲನ–ಪ್ರತಿಭಟನೆಗೆ ಅನುಮತಿ ಕೋರಿ ಮತ್ತೆ ನಾಲ್ಕು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.

ಸಾರ್ವಜನಿಕ ಸ್ಥಳದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸ ಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರದಲ್ಲೇ ಅದ್ದೂರಿಯಾಗಿ ಪಥಸಂಚಲನ ನಡೆಸಲು ಪಟ್ಟು ಹಿಡಿದಿರುವ ಆರ್‌ಎಸ್‌ಎಸ್‌, ಹೈಕೋರ್ಟ್‌ ನಿರ್ದೇಶನದಂತೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿತ್ತು. ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಚಿತ್ತಾಪುರದಲ್ಲಿ ಅದೇ ದಿನದಂದು ಪಥಸಂಚಲನ, ಪ್ರತಿಭಟನೆ ನಡೆಸಲು ಇನ್ನಷ್ಟು ಸಂಘಟನೆಗಳು ಸಜ್ಜಾಗಿವೆ.

ADVERTISEMENT

ಅಕ್ಟೋಬರ್‌ 21ರಂದು ಆರ್‌ಎಸ್‌ಎಸ್‌ ಜೊತೆಗೆ ಭೀಮ್‌ ಆರ್ಮಿ, ಭಾರತೀಯ ದಲಿತ ಪ್ಯಾಂಥರ್‌ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಬುಧವಾರದಂದು ಗೊಂಡ–ಕುರುಬ ಎಸ್‌.ಟಿ ಹೋರಾಟ ಸಮಿತಿ ಹಾಗೂ ಗುರುವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಇಂಡಿಯನ್‌ ಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಕರ್ನಾಟಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮನವಿ ಮಾಡಿವೆ. ಇದರೊಂದಿಗೆ ಚಿತ್ತಾಪುರದಲ್ಲಿ ಪಥಸಂಚಲನ–ಮೆರವಣಿಗೆ ನಡೆಸಲು ಏಳು ಸಂಘಟನೆಗಳು ಮನವಿ ಮಾಡಿದಂತಾಗಿದೆ. 

‘ರಾಜ್ಯ ಸರ್ಕಾರ ಈಗಾಗಲೇ ಗೊಂಡ ಪರ್ಯಾಯ ಪದವಾದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ 11 ವರ್ಷಗಳು ಕಳೆದಿವೆ. ಆದರೆ, ಈತನಕ ಕೇಂದ್ರ ಸರ್ಕಾರ ಎಸ್‌.ಟಿ ಮೀಸಲಾತಿ ನೀಡಿಲ್ಲ. ಇದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಚಿತ್ತಾಪುರದ ಕನಕ ಭವನದಿಂದ ತಹಶೀಲ್ದಾರ್‌ ಕಚೇರಿ ತನಕ ನ.2ರಂದು ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು’ ಎಂದು ಗೊಂಡ–ಕುರುಬ ಎಸ್‌.ಟಿ ಹೋರಾಟ ಸಮಿತಿ ಮನವಿ ಸಲ್ಲಿಸಿದೆ. 

‘ರಾಜ್ಯ ಹಾಗೂ ದೇಶದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ನೆಮ್ಮದಿಗಾಗಿ ನ.2ರಂದು ‘ಪ್ರೇಯರ್‌ ವಾಕ್‌’ (ಪ್ರಾರ್ಥನಾ ನಡಿಗೆ) ನಡೆಸಲು ಅವಕಾಶ ನೀಡಬೇಕು’ ಎಂದು ಕೋರಿ ಇಂಡಿಯನ್‌ ಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಕರ್ನಾಟಕ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. 

‘ಅತಿವೃಷ್ಟಿಯಿಂದ ಅ‍ಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್‌ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಮಹಾರಾಷ್ಟ್ರಕ್ಕೆ ₹1,566 ಕೋಟಿ ಪರಿಹಾರ ಘೋಷಿಸಿದ್ದರೆ, ಕರ್ನಾಟಕಕ್ಕೆ ಬರೀ ₹385 ಕೋಟಿ ಕೊಟ್ಟಿದೆ. ಈ ತಾರತಮ್ಯ ಖಂಡಿಸಿ ಹಸಿರು ಶಾಲು ಹಾಗೂ ಬಾರಕೋಲು ಹಿಡಿದು ನ.2ರಂದು ಪಥಸಂಚಲನ ನಡೆಸಲು ಅವಕಾಶ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮನವಿ ಮಾಡಿದೆ. 

‘ಆರ್‌ಎಸ್‌ಎಸ್‌ಗೆ ಲಾಠಿ ಹಿಡಿದು ಪಥಸಂಚಲನಕ್ಕೆ ಅವಕಾಶ ನೀಡಿದರೆ, ಬೇರೆ ಸಂಘಟನೆಯವರೂ ತಮ್ಮಿಚ್ಛೆಯಂತೆ ಲಾಠಿ, ತಲವಾರ, ಚಾಕು ಸೇರಿ ವಿವಿಧ ಆಯುಧಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕಾಗುತ್ತದೆ. ಹೀಗಾಗಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡಬಾರದು. ಒಂದೊಮ್ಮೆ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದರೆ, ಭೀಮ್‌ ಆರ್ಮಿ ಹಾಗೂ ವಿವಿಧ ಸಂಘಟನೆಗಳ ಜೊತೆಗೆ ನಮ್ಮ ಸಂಘಟನೆಯಿಂದಲೂ ಪರ್ಯಾಯವಾಗಿ ಪಥಸಂಚಲನ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಎಚ್ಚರಿಸಿದೆ.

ಇನ್ನೊಂದೆಡೆ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸೌಹಾರ್ದ ಕರ್ನಾಟಕ ಸಂಘಟನೆಯ ಮುಖಂಡರು, ‘ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ಗೆ ಪಥಸಂಚಲನ ನಡೆಸಲು ಅನುಮತಿ ನೀಡಬಾರದು’ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ
ಆರ್‌ಎಸ್‌ಎಸ್‌ ಪಥಸಂಚಲನ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಕಲಬುರಗಿ ಪೀಠ ಅಕ್ಟೋಬರ್‌ 24ರಂದು ಮಧ್ಯಾಹ್ನ ನಡೆಸಲಿದೆ. ಚಿತ್ತಾಪುರದಲ್ಲಿ ಅಕ್ಟೋಬರ್‌ 19ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ, ಅದೇ ದಿನ ಮೆರವಣಿಗೆ ನಡೆಸಲು ಭೀಮ್‌ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳೂ ಅವಕಾಶ ಕೋರಿದ್ದವು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಕಾರಣ ನೀಡಿ, ತಹಶೀಲ್ದಾರರು ಮೂರೂ ಸಂಘಟನೆಗಳಿಗೆ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಮುಖಂಡ ಅಶೋಕ ಪಾಟೀಲ ಅವರು ಅ.19ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪೀಠವು, ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಪಥಸಂಚಲನ ಕುರಿತು ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಿ, ಹೈಕೋರ್ಟ್‌ ವಿಚಾರಣೆಯನ್ನು ಮುಂದೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.